ಮಂಗಳೂರು, ಡಿ 4 (Daijiworld News/MSP): ಬಟ್ಟೆ ಒಣಗಲು ಹಾಕುತ್ತಿದ್ದ ವೇಳೆ ವಿದ್ಯುತ್ ವಯರ್ ಸ್ಪರ್ಶಿಸಿ ಶಾಕ್ ತಗುಲಿ, ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮಂಜನಾಡಿ ಗ್ರಾಮದ ಅಸೈ ಮದಕ ಎಂಬಲ್ಲಿ ಡಿ.4 ರ ಬುಧವಾರ ಬೆಳಗ್ಗೆ ನಡೆದಿದೆ. ಮೃತರನ್ನು ಅಸೈ ಮದಕ ನಿವಾಸಿ ನಾಗೇಶ್ ಎಂಬವರ ಪತ್ನಿ ರೋಹಿಣಿ (30) ಮೃತಪಟ್ಟವರು.
ಸಾಂದರ್ಭಿಕ ಚಿತ್ರ
ಬೆಳಗ್ಗೆ ರೋಹಿಣಿ ಬಟ್ಟೆ ಒಗೆದು ಆ ಬಳಿಕ ಅದನ್ನು ಒಣಗಿಸಲೆಂದು ಅಂಗಳದಲ್ಲಿ ಕಟ್ಟಿದ್ದ ಹಗ್ಗದ ಮೇಲೆ ಹಾಕುತ್ತಿದ್ದಾಗ ಅಂಗಳಕ್ಕೆ ಬಲ್ಬ್ ಹಾಕಲು ಎಳೆದಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ತಗುಲಿದೆ. ಈ ವೇಳೆ ವಿದ್ಯುತ್ ಹರಿದಿದೆ. ತಕ್ಷಣ ಮನೆಯವರು ಮೈನ್ ಸ್ವಿಚ್ ಆಫ್ ಮಾಡಿದರಾದರೂ ರೋಹಿಣಿ ಅವರನ್ನು ಬದುಕಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಮೃತ ರೋಹಿಣಿ ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪತಿ, ಪತ್ನಿ ಇಬ್ಬರೂ ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿದ್ದು ಕೆಲವೊಮ್ಮೆ ನಾಗೇಶ್ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.