ವಿಟ್ಲ, ಡಿ 05 (Daijiworld News/MB): ಸರಕಾರಿ ಬಸ್ ಚಾಲಕನಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಂಧಿತ ಆರೋಪಿ ಬಾಯಾರು ನಿವಾಸಿ ಮೊಯಿದುರವರ ಪುತ್ರ ಫಯಾಝ್ (28) ಡಿಸೆಂಬರ್ 4 ರಂದು ವಿಟ್ಲದ ಹಳೆ ಬಸ್ ನಿಲ್ದಾಣದಲ್ಲಿ ಸರಕಾರಿ ಬಸ್ ಚಾಲಕನಿಗೆ ಹಲ್ಲೆ ಮಾಡಿದ್ದಾರೆ.
ಮಲ್ಲ-ಪೆರ್ಲ- ವಿಟ್ಲ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ವಿಟ್ಲ ಪ್ರವೇಶಿದಾಗ ಬಸ್ ಗೆ ಹತ್ತಿದ ಫಯಾಝ್ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದು ಈ ಸಂದರ್ಭದಲ್ಲಿ ಫಯಾಝ್ ಅಮಲು ಪದಾರ್ಥ ಸೇವನೆ ಮಾಡಿದ್ದರೆಂದು ಬಸ್ ಚಾಲಕ ವಾಸುದೇವ ರೆಡ್ಡಿ ಪೊಲೀಸರಿಗೆ ತಿಳಿಸಿದ್ದಾರೆ.
ಆರೋಪಿಯನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣಾ ಪ್ರೋಬೆಷನರಿ ಎಸ್ ಐ ವಿನೋದ್ ರೆಡ್ಡಿ ಹಾಗೂ ರಾಜೆಶ್ರವರ ನೇತೃತ್ವದಲ್ಲಿ ಪೊಲೀಸರ ತಂಡ ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.