ಮೂಡುಬಿದಿರೆ, ಡಿ 07 (Daijiworld News/MB) : ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಕಡಂದಳೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ದಲಿತೆ ಎಂಬ ಕಾರಣಕ್ಕೆ ಅರ್ಚಕರು ಹೊರಕಳುಹಿಸಿ ಅವಮಾನ ಮಾಡಿದ್ದಾರೆ ಹಾಗೂ ಪಂಕ್ತಿ ಭೇದ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಗುರುವಾರ ಮುಜರಾಯಿ ಮತ್ತು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ದಲಿತ ಮಹಿಳಾ ಪೊಲೀಸ್ ಸಿಬ್ಬಂದಿ ತನಗೆ ಅನ್ಯಾಯವಾಗಿಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ದೇವಸ್ಥಾನದಲ್ಲಿ ನಡೆಯಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಡಂದಳೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ದಲಿತೆ ಪೊಲೀಸ್ ಪೇದೆ ದೇವಸ್ಥಾನದ ಒಳಗಡೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ದಲಿತೆ ಎಂದು ತಿಳಿದ ಅರ್ಚಕರು ನಿಮ್ಮನ್ನು ಯಾರು ಈ ದೇವಸ್ಥಾನದ ಒಳಗೆ ಬಿಟ್ಟುಕೊಂಡಿದ್ದು? ನೀವು ದೇವಸ್ಥಾನದ ಹೊರಗಡೆ ಪಾರ್ಕಿಂಗ್ ಸ್ಥಳದಲ್ಲಿ ಕಾರ್ಯನಿರ್ವಹಿಸಿ, ನೀವು ಒಳಗೆ ಬಂದಿದ್ದರಿಂದ ದೇವಸ್ಥಾನ ಮೈಲಿಗೆಯಾಗಿದೆ ಎಂದು ಅವಮಾನ ಮಾಡಿ ದೇವಸ್ಥಾನದಿಂದ ಹೊರಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ಪೊಲೀಸ್ ಮಹಿಳಾ ಸಿಬ್ಬಂದಿಯನ್ನು ಹೊರಹಾಕಿದ್ದನ್ನು ಪ್ರಶ್ನಿಸಿದ್ದು ಆದರೂ ಅರ್ಚಕ ಸಿಬ್ಬಂದಿಯವರನ್ನು ಹೊರ ಕಳುಹಿಸಿದ್ದಾರೆ.
ಅಷ್ಟು ಮಾತ್ರವಲ್ಲದೇ ದೇವಸ್ಥಾನದ ಪೂಜೆ ನಡೆದ ಬಳಿಕ ಬ್ರಾಹ್ಮಣ ಸಮುದಾಯದವರಿಗೆ ಪ್ರತ್ಯೇಕ ಭೋಜನಾ ವ್ಯವಸ್ಥೆ ಮಾಡಿ, ಅವರು ಊಟ ಮಾಡಿದ ನಂತರವೇ ಉಳಿದ ಸಮುದಾಯದ ಭಕ್ತರಿಗೆ ಅವಕಾಶ ಮಾಡಿಕೊಟ್ಟಿದ್ದರು. ಈ ನಿಟ್ಟಿನಲ್ಲಿ ಹಲವಾರು ಭಕ್ತರು ದೇವಸ್ಥಾನದಲ್ಲಿ ಊಟ ಸೇವಿಸದೇ ಮನೆಗೆ ತೆರಳಿದ್ದರು. ಹಾಗೆಯೇ ಪೊಲೀಸ್ ಪೇದೆಗೆ ಅವಮಾನ ಮಾಡಿದ ಹಿನ್ನಲೆಯಲ್ಲಿ ಎಲ್ಲಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯವರು ಸ್ಥಳೀಯ ಹೋಟೆಲ್ ನಲ್ಲಿ ಊಟ ಮಾಡಿದ್ದರು ಎಂದು ಹೇಳಲಾಗಿದೆ.
ಈ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಖರ್ಚುವೆಚ್ಚವನ್ನು ಸರಕಾರವೇ ಭರಿಸುತ್ತಿದ್ದು ಗ್ರಾಮದ ವಿವಿಧ ಜಾತಿಗಳ 8 ಜನರನ್ನೊಳಗೊಂಡ ಸಮಿತಿಯೂ ಇದೆ.