ನವದೆಹಲಿ, ಸೆ16: ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಮತ್ತು ಸಿಮ್ ಕಾರ್ಡ್ ಗಳಿಗೆ ಆಧಾರ್ ಕಡ್ಡಾಯ ಮಾಡಿತ್ತು. ಇದೀಗ ಮತ್ತೇ ಮುಂದುವರೆದು, ಡ್ರೈವಿಂಗ್ ಲೈಸನ್ಸ್ ಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಆಧಾರ್ ಕಾರ್ಡನ್ನು ಡ್ರೈವಿಂಗ್ ಲೈಸೆನ್ಸ್ ಗೆ ಸರ್ಕಾರ ಲಿಂಕ್ ಮಾಡಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದು, ಸದ್ಯದಲ್ಲಿಯೇ ಈ ಪ್ರಕ್ರಿಯೆ ಜಾರಿಗೆ ಬರಲಿದೆ. ಉತ್ತಮ ಆಡಳಿತಕ್ಕೆ ಮತ್ತು ಸಬಲೀಕರಣಕ್ಕೆ ಆಧಾರ್ ಕಾರ್ಡ್ ಸಾಧನವಾಗಲಿದೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಒಂದೇ ಹೆಸರಿನಲ್ಲಿ ಹಲವು ಲೈಸನ್ಸ್ ಗಳನ್ನು ನೀಡಲಾಗುತ್ತಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಹಲವು ದೂರುಗಳು ಬರುತ್ತಿದ್ದು, ವಿವಿಧ ಅಪರಾಧ ಕೃತ್ಯಗಳಲ್ಲಿ ಈ ಡ್ರೈವಿಂಗ್ ಲೈಸೆನ್ಸ್ ದುರ್ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿಗಳು ಈ ಮೊದಲೇ ಕೇಂದ್ರಕ್ಕೆ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಡ್ರೈವಿಂಗ್ ಲೈಸನ್ಸ್ ಗೂ ಆಧಾರ್ ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆಸಿದೆ.