ವಿಟ್ಲ, ಡಿ 07 (DaijiworldNews/SM): ಗುಡ್ಡ ಕುಸಿದು ಬಿದ್ದ ಪರಿಣಾಮ ಮಣ್ಣಿನಡಿಯಲ್ಲಿ ಸಿಲುಕಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಕನ್ಯಾನ ಸಮೀಪದ ಒಡಿಯೂರು ಎಂಬಲ್ಲಿ ನಡೆದಿದೆ.
ಮೃತರನ್ನು ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ನಿವಾಸಿ ರಮೇಶ್,ಮಾಣಿಲ ಗ್ರಾಮದ ಮುರುವ ನಿವಾಸಿ ಪ್ರಕಾಶ್ ಹಾಗೂ ಆಲಂಗಾರು ನಿವಾಸಿ ಬಾಳಪ್ಪ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪ್ರಭಾಕರ್ ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕಟ್ಟಡ ಕಾಮಗಾರಿ ಹಿನ್ನೆಲೆಯಲ್ಲಿ ಗುಡ್ಡ ಅಗೆಯಲಾಗುತ್ತಿತ್ತು.
ಕಟ್ಟಡ ಕಾಮಗಾರಿಗಾಗಿ ಜೆಸಿಬಿ ಹಾಗೂ ಕಾರ್ಮಿಕರ ಮೂಲಕ ಕಾಮಗಾರಿ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಾರ್ಮಿಕರು ಪಿಲ್ಲರ್ ಹೊಂಡಗಳನ್ನು ಅಗೆಯುತ್ತಿದ್ದರು. ಆ ಸಂದರ್ಭ ಏಕಾಏಕಿ ಮೇಲ್ಭಾಗದ ಗುಡ್ಡ ಕುಸಿದುಬಿದ್ದಿದೆ. ಬೃಹತ್ ಗಾತ್ರದಲ್ಲಿ ಮಣ್ಣು ಕುಸಿದಿರುವ ಪರಿಣಾಮ ಕೆಳಗಿನ ಭಾಗದಲ್ಲಿ ಹೊಂಡ ತೋಡುತ್ತಿರುವ ಕಾರ್ಮಿಕರ ಅರಿವಿಗೆ ಬಾರದೆ ಹಾಗೂ ಅಲ್ಲಿಂದ ಓಡಿ ಹೋಗಲಾಗದೆ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ವಿಟ್ಲ ಠಾಣಾ ಪೊಲೀಸರು ದೌಡಾಯಿಸಿದ್ದಾರೆ.