ಬಂಟ್ವಾಳ, ಡಿ 07 (DaijiworldNews/SM): ಕಂಬಳಕ್ಕೆ ಸರಕಾರದಿಂದ ಪ್ರೋತ್ಸಾಹ ಹಾಗೂ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ.ಆಶ್ವಥ ನಾರಾಯಣ ಹೇಳಿದ್ದಾರೆ.
ಡಿಸೆಂಬರ್ 7ರ ಶನಿವಾರ ಸಂಜೆ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತುಳುನಾಡಿನ ಜಾನಪದಕ್ರೀಡೆಯಾಗಿರುವ ಕಂಬಳಕ್ಕೆ ಶಕ್ತಿ ತುಂಬಲು ಸರಕಾರ ಬದ್ದವಾಗಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿಗೂ ಕಂಬಳವನ್ನು ವಿಸ್ತರಿಸುವುದಾದರೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಕಂಬಳ ಎದುರಿಸುವ ಅಡೆತಡೆಗಳ ಬಗ್ಗೆ ಕಂಬಳ ಸಮಿತಿ ನಮ್ಮ ಗಮನಕ್ಕೆ ತಂದಿದ್ದಾರೆ ಎಂದ ಅವರು ಇದನ್ನು ನಿವಾರಿಸಲು ನಾವೆಲ್ಲರು ಯುವನಾಯಕರು ಒಗ್ಗಟ್ಟಾಗಿ ಸಹಕಾರ ನೀಡುತ್ತೆವೆ ಎಂದರು. ಈಗಾಗಲೇ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ತೂಗುಗತ್ತಿ ಎದುರಾಗಿದೆ. ಇನ್ನು ಕಳೆದ ಬಾರಿ ನಡೆದ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದೆ ಎಂದು ಪೆಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ನಲ್ಲಿ ಕಂಬಳದ ಬಗ್ಗೆ ಅಪಸ್ವರ ಎತ್ತಿದೆ. ಈ ಹಿನ್ನೆಲೆಯಲ್ಲಿ ಕಂಬಳ ಪರ ಡಿಸಿಎಂ ಬ್ಯಾಟ್ ಬೀಸಿರುವುದು ಕಂಬಳಪ್ರಿಯರಿಗೆ ಕೊಂಚ ಸಮಾಧಾನ ನೀಡಿದೆ.