ಮಂಗಳೂರು, ಡಿ 09(Daijiworld News/MSP): ಕರಾವಳಿಯಲ್ಲಿ ಶಾಂತಿ ಕದಡಲು ಕಾರಣವಾಗುತ್ತಿರುವ ಗೋ ಕಳ್ಳತನದ ವಿರುದ್ದ ಸಮರ ಸಾರಿರುವ ನಗರ ಪೊಲೀಸ್ ಇಲಾಖೆ ಈ ಹಿನ್ನಲೆಯಲ್ಲಿ ಗೋಕಳ್ಳತನ ಹಾಗೂ ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಭಾಗಿಯಾದ ಹಳೇ ಆರೋಪಿಗಳಿಗೆ ಪರೇಡ್ ನಡೆಸುವ ಮೂಲಕ ಎಚ್ಚರಿಕೆಯನ್ನು ರವಾನಿಸಿದರು.
ಡಿ.೯ ರ ಸೋಮವಾರ ಬೆಳ್ಳಂಬೆಳಗೆ ಪೊಲೀಸ್ ಮೈದಾನದಲ್ಲಿ ಗೋಕಳ್ಳತನ ಹಾಗೂ ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪರೇಡ್ ನಡೆಸಿದ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪಿ.ಎಸ್ ಹರ್ಷ, ಹಳೆ ಆರೋಪಿಗಳಿಗೆ ಜಾನುವಾರು ವಧೆ ಕಳ್ಳತನ, ಅಕ್ರಮ ಮಾರಾಟ ಮುಂತಾದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಮತ್ತೊಮ್ಮೆ ಜಾನುವಾರು ಕಳ್ಳತನ ಹಾಗೂ ಅಕ್ರಮ ಗೋಸಾಗಾಟ ಮುಂತಾದ ಕೃತ್ಯದಲ್ಲಿ ಭಾಗಿಯಾಗಿರುವ ವಿಚಾರ ಕಂಡು ಬಂದರೆ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ರವಾನಿಸಿದರು.
ಈ ಹಿಂದೆ ಆಯುಕ್ತರಾಗಿದ್ದ, ಸಂದೀಪ್ ಪಾಟೀಲ್ ಅವರು ಜುಲೈನಲ್ಲಿ 102 ಮಂದಿ ಗೋ ಕಳವು ಆರೋಪಿಗಳು ಹಾಗೂ ಖರೀದಿದಾರರ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದರು.