ಬಂಟ್ವಾಳ, ಡಿ 10 (Daijiworld News/MB) : ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷ, ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದ ಜಿ.ಆನಂದ ಅಸೌಖ್ಯದ ಕಾರಣದಿಂದಾಗಿ ಮಂಗಳವಾರ ಮುಂಜಾನೆ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದಿದ್ದಾರೆ.
1952 ರಲ್ಲಿ ಇವರ ಜನನ ಹೊಂದಿದ ಜಿ.ಆನಂದ ಅವರು ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ವೃತ್ತಿಯಲ್ಲಿ ಟೈಲರ್ ಅಗಿದ್ದರು. ಹಾಗೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.
ಜಿ.ಆನಂದರವರು 2 ಬಾರಿ ಬಂಟ್ವಾಳ ಪುರಸಭಾ ಸದಸ್ಯ ರಾಗಿ ಆಯ್ಕೆಯಾಗಿದ್ದಾರೆ ಹಾಗೂ 2 ಬಾರಿ ಬಂಟ್ವಾಳ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದರು. ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ 3 ಬಾರಿ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ ಶಾರದಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಓರ್ವ ಮಗ ಇತ್ತೀಚೆಗೆ ಅಪಘಾತದಲ್ಲಿ ಮೃತನಾಗಿದ್ದಾನೆ.
ಈ ಕುರಿತು ಸಂತಾಪ ವ್ಯಕ್ತಪಡಿಸಿದ ಶಾಸಕ ರಾಜೇಶ್ ನಾಯ್ಕ್ "ನಾನು ಬಂಟ್ವಾಳದಲ್ಲಿ ಪ್ರಥಮವಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ವೇಳೆ ಕಾರ್ಯಕರ್ತರ ಪರಿಚಯಿಸಿದ ವ್ಯಕ್ತಿ ಜಿ.ಆನಂದ ಅವರು , ಆ ಬಳಿಕದ ನನ್ನ ರಾಜಕೀಯ ಜೀವನದಲ್ಲಿ ನನಗೆ ತುಂಬಾ ಹತ್ತಿರದಲ್ಲಿ ರಾಜಕೀಯ ವಾಗಿ ಹಾಗೂ ಪಕ್ಷ ಸಂಘಟನೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ನನ್ನ ಜೊತೆಯಲ್ಲಿದ್ದು ಸಹಕಾರ ನೀಡಿದ ವ್ಯಕ್ತಿಯನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ನನಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಸಂಸದ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಡಾ. ಪ್ರಭಾಕರ್ ಭಟ್, ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಗೋವಿಂದ ಪ್ರಭು, ಉದಯಕುಮಾರ್ ಬಂಟ್ವಾಳ ಸಹಿತ ಅನೇಕರು ಸಂತಾಪ ಸೂಚಿಸಿದ್ದಾರೆ.