ಮಂಗಳೂರು, ಡಿ 10 (Daijiworld News/MB) : ಇಲ್ಲಿನ 2 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದಲ್ಲಿ ಬೈಕಂಪಾಡಿಯಲ್ಲಿ ವಾಸಿಸುತ್ತಿದ್ದ ಅಸ್ಸಾಂ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು ಅಪರಾಧಿಗೆ 5 ವರ್ಷಗಳ ಸಜೆ ವಿಧಿಸಲಾಗಿದೆ.
ಬೈಕಂಪಾಡಿಯ ಅಂಗರ ಗುಂಡಿ ಬಳಿ 6 ವರ್ಷದ ಬಾಲಕಿ ತನ್ನ ಹೆತ್ತವರೊಂದಿಗೆ ವಾಸವಾಗಿದ್ದು ಅಪರಾಧಿ ಅತೀಕ್ ಉರ್ ರಹ್ಮಾನ್ (28) ಬಾಲಕಿ ವಾಸಿಸುತ್ತಿದ್ದ ಮನೆಯ ಪಕ್ಕದಲ್ಲಿ ವಾಸವಾಗಿದ್ದ. 2018ರ ಜೂನ್ 24ರಂದು ಸಂಜೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋದ ಅಪರಾಧಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಕುರಿತು ಬಾಲಕಿ ತನ್ನ ತಂದೆಗೆ ತಿಳಿಸಿದ್ದು ತಂದೆ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದರು.
ಈ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ಹಿಂದಿನ ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ಸಲ್ಲಿಸಿದ್ದರು. 25 ಮಂದಿ ಸಾಕ್ಷಿಗಳ ಪೈಕಿ 20 ಮಂದಿ ಸಾಕ್ಷಿ ಹೇಳಿದ್ದರು.
ಪೋಕ್ಸೊ ವಿಶೇಷ ನ್ಯಾಯಾಧೀಶರಾದ ಪಲ್ಲವಿ ಬಿ.ಆರ್ ವಿಚಾರಣೆ ನಡೆಸಿ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ಆತನಿಗೆ 5 ವರ್ಷ ಸಾದಾ ಸಜೆ, 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ದಂಡದಲ್ಲಿ 3 ಸಾವಿರ ರೂಪಾಯಿಯನ್ನು ಸಂತ್ರಸ್ಥೆ ಬಾಲಕಿಗೆ ನೀಡಬೇಕು ಅದಲ್ಲದೇ ಬಾಲಕಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದೆಂದು ಆದೇಶದಲ್ಲಿ ತಿಳಿಸಲಾಗಿದೆ.
ಸರಕಾರದ ಪರವಾಗಿ ವಿಶೇಷ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದಾರೆ.