ಮಂಗಳೂರು, ಡಿ 11 (Daijiworld News/MB) : "ಸಮಾಜದಲ್ಲಿ ಇಂದು ಎಲ್ಲಾ ವ್ಯವಸ್ಥೆಗಳು ಕೆಟ್ಟು ಹೋಗಲು ಸುದ್ದಿಸಂಸ್ಥೆಗಳೇ ಕಾರಣ ಎಂದು ದೂರುವುದು ಸರಿಯಲ್ಲ. ಸಮಾಜಕ್ಕೂ ಅದರದ್ದೇ ಆದ ಹೊಣೆಗಾರಿಕೆಗಳಿದ್ದು, ಅದನ್ನು ನಿರ್ವಹಿಸುವ ಅಗತ್ಯವಿದೆ" ಎಂದು ದಾಯ್ಜಿವರ್ಲ್ಡ್ ಆಂಗ್ಲ ಪತ್ರಿಕೆ ಸಂಪಾದಕ ಹೇಮಾಚಾರ್ಯ ಅಭಿಪ್ರಾಯಪಟ್ಟರು.
ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಮಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮತ್ತು ಎಸ್ಡಿಎಂ ಪಿಜಿ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರೀಸರ್ಚ್ ಜಂಟಿಯಾಗಿ ಆಯೋಜಿಸಿದ್ದ 'ಮಾಧ್ಯಮ ನಿರ್ವಹಣೆ ಮತ್ತು ಅವುಗಳ ಸಾಮಾಜಿಕ ಹೊಣೆಗಾರಿಕೆ' ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಭಾರತದ ಬಹುತೇಕ ಮಾಧ್ಯಮಗಳು ಇಂದು ಬಿಕರಿಯಾಗಿವೆ ಎಂದು ವಿಷಾದಿಸಿದ ಅವರು ವಿದೇಶಿ ಮಾಧ್ಯಮಗಳಿಗೆ ತುಲನೆ ಮಾಡಿದಾಗ ಭಾರತೀಯ ಮಾಧ್ಯಮಗಳು ರಾಜಕೀಯ ಪಕ್ಷಗಳು, ಧರ್ಮ, ಸಮುದಾಯ ಮತ್ತು ಉದ್ಯಮ ವಲಯಕ್ಕೆ ಮಾರಾಟವಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಬೇಡಿಕೆ ಮತ್ತು ಪೂರೈಕೆ ಎನ್ನುವ ಎರಡು ವಿಚಾರಗಳ ಮೇಲೆ ಮಾಧ್ಯಮಗಳು ಅವಲಂಬಿತವಾಗಿದೆ ಎನ್ನುವುದನ್ನು ಒಪ್ಪಿಕೊಂಡ ಅವರು "ಟಿಆರ್ಪಿಗೋಸ್ಕರ ಸುದ್ದಿಮಾಧ್ಯಮಗಳು ನಕಾರಾತ್ಮಕ ಸುದ್ದಿಗಳನ್ನು ವೈಭವೀಕರಿಸುವುದು ಸಹಜವಾಗಿದೆ. ಜೊತೆಗೆ ಇಂತಹ ಸುದ್ದಿಗಳನ್ನೇ ಜನ ಬಯಸುತ್ತಿದ್ದಾರೆ. ವಿಶೇಷವಾಗಿ ಅಪರಾಧ ಮತ್ತು ಸಿನೆಮಾ, ಗಾಸಿಪ್ ಸುದ್ದಿಗಳಿಗೆ ಅವುಗಳು ಹೆಚ್ಚು ಮಹತ್ವವನ್ನು ನೀಡುತ್ತಿವೆ. ಹಾಗಂತ ಮಾಧ್ಯಮ ಎಲ್ಲವೂ ಕೆಟ್ಟು ಹೋಗಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಇತ್ತೀಚಿನ ಕೆಲವು ಭ್ರಷ್ಟಾಚಾರಗಳಿರಬಹುದು, ಅಮಾನವೀಯ ಘಟನೆಗಳು ಮಾಧ್ಯಮಗಳಿಂದಲೇ ಜಗತ್ತಿನ ಮುಂದೆ ಬೆತ್ತಲಾದವು ಎನ್ನುವುದನ್ನೂ ಜನ ಒಪ್ಪಿಕೊಳ್ಳಬೇಕು" ಎಂದು ಖಡಾಖಂಡಿತವಾಗಿ ನುಡಿದರು.
"ಇಂದು ಡಿಜಿಟಲ್ ಯುಗದಲ್ಲಿ ಮಾಧ್ಯಮಗಳು ಕಿರಿದಾಗಿವೆ. ಕ್ಷಣ ಮಾತ್ರದ ಸುದ್ದಿಗಳು ಬೆರಳು ತುದಿಯಲ್ಲಿ ಎಲ್ಲರಿಗೂ ಸಿಗುತ್ತದೆ. ಆದರೆ ಇಲ್ಲೂ ನಕಾರಾತ್ಮಕ, ವೈಭವೀಕರಣವಾಗುವ ಸುದ್ದಿಗಳನ್ನೇ ಜನ ಬಯಸುತ್ತಾರೆ. ಅಪರಾಧ ಜಗತ್ತು ವಿಶಾಲವಾಗುತ್ತಿದೆ. ಸಭ್ಯ ಜನರು ಇಂದಿಗೂ ಕೂಡಾ ಮಾನವೀಯ ನೆಲೆಯಲ್ಲಿರುವ ಸುದ್ದಿಗಳನ್ನು ಓದುತ್ತಾರೆ. ಭಾರತೀಯ ಮಾಧ್ಯಮಗಳು ಎಂದೆಂದಿಗೂ ತಮ್ಮ ನೈತಿಕತೆಯನ್ನು ಉಳಿಸಿಕೊಂಡು ಭಾರತದ ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ" ಎಂದು ಹರ್ಷ ವ್ಯಕ್ತಪಡಿಸಿದರು.
"ಸಮಾಜದಲ್ಲಿ ಹೊಣೆಗಾರಿಕೆ ಇರುವ ಮನುಷ್ಯರು ಕೆಲವೊಂದು ವಿಚಾರಗಳನ್ನು ತಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಅವರು ಸಲಹೆ ನೀಡಿದರು. "ಮುಖ್ಯವಾಗಿ ನಗು, ಎಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದು, ಸಮಯದ ಪರಿಪಾಲನೆ, ಎಲ್ಲರಿಗೆ ಒಳಿತಾಗಲೀ ಎನ್ನುವ ಪ್ರಾರ್ಥನೆ, ಪ್ರಶ್ನಾರ್ಥಕವಾಗುವ ವಿಚಾರಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ" ಎಂದರು.
ಅಧ್ಯಕ್ಷತೆಯನ್ನು ಅಸೋಸಿಯೇಶನ್ ಅಧ್ಯಕ್ಷ ಮಾರ್ಸೆಲ್ ಮೊಂತೆರೋ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ದೀಪಾನಾಯಕ್, ಉಪಾಧ್ಯಕ್ಷ ಕೆ ಜಯರಾಜ್ ರೈ, ಸದಸ್ಯ ದೇವರಾಜ್ ಮೊದಲಾದವರಿದ್ದರು.