ಬಂಟ್ವಾಳ, ಡಿ 12 (DaijiworldNews/SM): ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ಬಂಟ್ವಾಳ ಸಹಕಾರಿ ಸಂಘದ ಅಧ್ಯಕ್ಷರು ಆದಂತಹ ಬಿಜೆಪಿಯ ಧುರೀಣ ಜಿ ಆನಂದ ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದರು. ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಬುಧವಾರ ನಡೆಯಿತು.
ಖಾಸಗಿ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ತೆರದ ವಾಹನದಲ್ಲಿ ಇರಿಸಿಕೊಂಡು, ಬಂಟ್ವಾಳ ಬಡ್ಡಕಟ್ಟೆ ಸಮೀಪದ ದೈವಗುಡ್ಡೆಯಲ್ಲಿರುವ ಅವರ ನಿವಾಸಕ್ಕೆ ಮೆರವಣಿಗೆಯಲ್ಲಿ ತರಲಾಯಿತು.
ಈ ಸಂದರ್ಭದಲ್ಲಿ ಬಿಸಿರೋಡಿನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ಶಾಸಕ ರಾಜೇಶ್ ನಾಯ್ಕ್ ಅವರು ಪಕ್ಷದ ಧ್ವಜ ವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಗೌರವ ಸಮರ್ಪಿಸಿದರು.
ಅಂತಿಮ ಯಾತ್ರೆಯಲ್ಲಿ ಪಕ್ಷದ ಮುಖಂಡರ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಕ್ಷಾತೀತವಾಗಿ ಪಾಲ್ಗೊಂಡಿರುವುದು ಗಮನ ಸೆಳೆಯಿತು. ಬಳಿಕ ಬಡ್ಡಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಒಕ್ಕಲಿಗ ಸಮುದಾಯದ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.