ಮಂಗಳೂರು, ಡಿ 12(Daijiworld News/MSP): ಬೃಹತ್ ಗಾತ್ರದ ಟ್ರಕ್ ವೊಂದು ಶರ್ಬತ್ ಕಟ್ಟೆ ಬಳಿಯ ಏರ್ ಪೋರ್ಟ್ ರಸ್ತೆಯಲ್ಲಿ ಸಿಲುಕಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆದ ಘಟನೆ ಡಿ.12 ರ ಗುರುವಾರ ಸುಮಾರು ೯ ಗಂಟೆಗೆ ನಡೆದಿದೆ. ಟ್ರಕ್ ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯಾ ಕಡೆಗೆ ಸಂಚರಿಸುತ್ತಿತ್ತು ಎನ್ನಲಾಗಿದೆ.
ಶರ್ಬತ್ ಕಟ್ಟೆ ಬಳಿ ಟ್ರಕ್ ಚಾಲಕ ಯು-ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಅದು ಸಾಧ್ಯವಾಗದೇ ರಸ್ತೆಯಲ್ಲೇ ಸಿಲುಕಿಕೊಂಡು ಸಂಚಾರ ದಟ್ಟನೆಗೆ ಕಾರಣವಾಗಿತ್ತು. ಶಾಲಾ ಕಾಲೇಜಿಗೆ,ಕಚೇರಿಗೆ, ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ದಾವಂತದಲ್ಲಿದ್ದ ಜನರೆಲ್ಲಾ ಅನಿರೀಕ್ಷಿತ ಟ್ರಾಫಿಕ್ ಜಾಮ್ ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು ಹಿಡಿಶಾಪ ಹಾಕುವಂತಾಯಿತು.
ಆ ಬಳಿಕ ಸ್ಥಳಕ್ಕೆ ದೌಡಾಯಿಸಿದ ಸಂಚಾರಿ ಪೊಲೀಸರು ರಸ್ತೆಯಲ್ಲಿ ಸಿಲುಕಿಕೊಂಡ ಟ್ರಕ್ ತೆರವುಗೊಳಿಸುವ ಪ್ರಯತ್ನ ನಡೆಸಿದರು. ಶಾಲಾ- ಕಾಲೇಜು ಕಚೇರಿಗೆ ತೆರಳುವ ಸಮಯದಲ್ಲಿ ಇಂತಹ ಬೃಹತ್ ಗಾತ್ರದ ಟ್ರಕ್ ಗಳ ಸಂಚಾರಕ್ಕೆ ಅವಕಾಶ ನೀಡದಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ವಿನಂತಿಸಿಕೊಂಡರು.