ಕುಂದಾಪುರ, ಡಿ 12(Daijiworld News/MB): ಇಲ್ಲಿಗೆ ಸಮೀಪದ ಕೋಟೇಶ್ವರದಲಿ ಗುರುವಾರ ನಡೆದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮ ರಥೋತ್ಸವಕ್ಕೆ ಊರ ಹಾಗೂ ಪರವೂರಿನಿಂದ ಬಂದ ಸಾವಿರಾರು ಮಂದಿ ಸಾಕ್ಷಿಯಾದರು.
ಈ ಬಾರಿಯ ಕೊಡಿ ಹಬ್ಬಕ್ಕಾಗಿ ಗುರುವಾರ ನಸುಕಿನಿಂದಲೇ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದ್ದ ಭಕ್ತರು ವೈಭವದ ರಥೋತ್ಸವದ ಆರೋಹಣವನ್ನು ನೋಡಿ ಕಣ್ಮನ ತುಂಬಿಕೊಂಡರು. ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬಂದ ಭಕ್ತರು, ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದ್ದರು.
ಬೆಳಿಗ್ಗೆ 10.55ಕ್ಕೆ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಜಯಕಾರಗಳೊಂದಿಗೆ ಸ್ವಾಗತಿಸಲಾಯಿತು. ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ನಂತರ ತಾಂಡವೇಶ್ವರ ದೇವರು, ತ್ರಿಶೂಲ ಹಾಗೂ ಗೋಳೆ ದೇವರು ರಥದ ಮೇಲಕ್ಕೆ ಏರಿಸಲಾಯಿತು.
ದೇವರ ಮೂರ್ತಿಗಳು ರಥವನ್ನು ಏರಿದ ಬಳಿಕ ನಂದಳಿಕೆಯ ಪಿ. ರವಿರಾಜ್ಭಟ್ ಅವರು ಕೋಟಿಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆ ಮೇಲಿರಿಸಿ ಚಂಡೆಗಳ ತಾಳಕ್ಕೆ ತಾಂಡವ ನರ್ತನ ಮಾಡಿದರು. ನಂತರ ನೆರೆದ ಭಕ್ತರು ಹರಹರ ಮಹಾದೇವ ಎನ್ನುವ ಜಯಘೋಷ ಮಾಡುತ್ತಿದ್ದಂತೆ ನರ್ತನದ ಮೂಲಕ ದೇವರೊಂದಿಗೆ ರಥದ ಮೇಲೇರಿದರು. ಉತ್ಸವ ಮೂರ್ತಿಯ ರಥಾರೋಹಣವಾದ ಬಳಿಕ ಮಂಗಳಾರತಿ, ಹಣ್ಣುಕಾಯಿ ಹಾಗೂ ರಥಕ್ಕೆ ಕಾಯಿ ಒಡೆಯುವ ಸೇವೆಗಳನ್ನು ಸಲ್ಲಿಸಲಾಯಿತು. ಬಳಿಕ ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವ ನಡೆಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು.
ರಥೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆ.ವಿ.ಆನಂದ ರಾವ್ ಮತ್ತು ಮಕ್ಕಳು ದಾವಣಗೆರೆ ಇವರಿಂದ ಉಚಿತ ಪಾನಕದ ವ್ಯವಸ್ಥೆ ಮಾಡಿದ್ದರೆ, ಹಿಂದೂ ಜಾಗರಣ ವೇದಿಕೆ ಕೋಟೇಶ್ವರ ಇವರಿಂದ ಉಚಿತ ಮಜ್ಜಿಗೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಗುರುವಾರ ರಾತ್ರಿ ಮಿತ್ರದಳ ಕೋಟೇಶ್ವರ ಪ್ರಾಯೋಜಿತ ಶ್ರೀ ಕೃಷ್ಣ ವಾದಿರಾಜ ಯಕ್ಷರಂಗ ಬೆಂಗಳೂರು ಇವರಿಂದ ವೀರ ಅಭಿಮನ್ಯು ಎನ್ನುವ ಯಕ್ಷಗಾನ ಪ್ರದರ್ಶನ ಶಾಂತಾರಾಮ ರಂಗ ಮಂಟಪದಲ್ಲಿ ನಡೆಯಲಿದೆ. ಶುಕ್ರವಾರ ರಾತ್ರಿ ಎನ್.ಆರ್.ಎನ್. ಸಹೋದರರ ಪ್ರಾಯೋಜಿತ ಕೋಟಿಲಿಂಗೇಶ್ವರ ಕಲಾ ಬಳಗ ಕೋಟೇಶ್ವರ ಇವರಿಂದ ಸುಧನ್ವ ಮೋಕ್ಷ ಯಕ್ಷಗಾನ ಪ್ರಸಂಗ ನಡೆಯಲಿದೆ.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ಎನ್. ರಾಘವೇಂದ್ರ ರಾವ್ ನೇರಂಬಳ್ಳಿ, ಕಾರ್ಯನಿರ್ವಹಣಾಧಿಕಾರಿ ಗಣೇಶ್ರಾವ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಸ್ಥಳೀಯ ಪ್ರಮುಖರಾದ ಎಂ.ಸುಧೀರಕುಮಾರ ಶೆಟ್ಟಿ, ದಿನೇಶ್ ಕಾಮತ್, ಕೃಷ್ಣದೇವ ಕಾರಂತ್ ಕೋಣಿ, ಅಶೋಕ್ ಪೂಜಾರಿ, ಡಾ.ಸುಧಾಕರ ನಂಬಿಯಾರ್, ಮಹೇಶ್ ಪೂಜಾರಿ ಕೋಡಿ, ರಮೇಶ್ ಭಟ್, ಗುರುರಾಜ್ ರಾವ್, ಪ್ರಭಾಕರ ಶೆಟ್ಟಿ ವಕ್ವಾಡಿ, ಎಎಸ್ಪಿ ಹರಿರಾಂ ಶಂಕರ್, ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ಉಪನಿರೀಕ್ಷಕ ಹರೀಶ್ ನಾಯ್ಕ್ ಇದ್ದರು.
ಕಳೆದ ಬಾರಿಗಿಂತ ಇಂದು ನಡೆದ ಮನ್ಮಹಾರಥೋತ್ಸವದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಕೋಟೇಶ್ವರ ಸಂಪೂರ್ಣ ಜನ ಸಂದಣಿಯಿಂದ ತುಂಬಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ನಡೆಸಿದ್ದರು.