ಮಂಗಳೂರು, ಡಿ 13(Daijiworld News/MSP): ನಗರದ ಹೊರವಲಯ ಕುಳಾಯಿಯಲ್ಲಿ ಕಾರಿನ ಮುಂಭಾಗದ ಸೀಟಿನೊಳಗೆ ಯುವತಿಯೋರ್ವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದಂತೆ ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಡಿ.12ರ ಗುರುವಾರ ಸಂಜೆ ನಡೆದಿದೆ.
ಕಾರಿನೊಳಗೆ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ನೋಡಿದ ಇತರ ವಾಹನ ಸವಾರರು ಮತ್ತು ಸಾರ್ವಜನಿಕರು, ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ ಕಾರು ನಿಲ್ಲಿಸದಿದ್ದಾಗ ಅನುಮಾನಗೊಂಡು ಸಾರ್ವಜನಿಕರು ಕಾರು ತಡೆದು ಪ್ರಶ್ನಿಸಿದ್ದಾರೆ.
ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ. ಈತನ ಈ ನಡವಳಿಕೆಯಿಂದ ಸಂಶಯಗೊಂಡ ಜನ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಕಾರು ಚಾಲಕ ಹಾಗೂ ಯುವತಿ ಸ್ನೇಹಿತರು ಅನ್ನುವ ವಿಚಾರ ಬೆಳಕಿಗೆ ಬಂದಿದೆ.