ಮಂಗಳೂರು, ಡಿ 13(Daijiworld News/MSP): ಕೆಲವು ದಿನಗಳ ಹಿಂದೆ ದಾಯ್ಜಿವಲ್ಡ್.ಕಾಮ್ ಬಿಎಸ್ಸಿ ಪದವೀಧರೆ ಜೆಶ್ಮಾ ಡಿಸೋಜಾ ಹಾಡ್ಗಿನ್ಸ್ ಲಿಂಫೋಮಾ ಎಂಬ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಗ್ಗೆ ಸುದ್ದಿ ಪ್ರಕಟಿಸಿ ಆಕೆಯ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಯಾಚಿಸಿತ್ತು. ಜೆಶ್ಮಾ ಡಿಸೋಜಾ ಅವರ ನೋವಿಗೆ "ದಾಯ್ಜಿವಲ್ಡ್ " ಓದುಗರು ಸ್ಪಂದಿಸಿದ ರೀತಿ ನಿಜಕ್ಕೂ ಅದ್ಬುತವಾಗಿತ್ತು. ಇದಕ್ಕೆ ದಾಯ್ಜಿವಲ್ಡ್ ಓದುಗರಿಗೆ ಅಭಾರಿಯಾಗಿದೆ.
ದಾಯ್ಜಿವಲ್ಡ್ ನಲ್ಲಿ ಜೆಶ್ಮಾ ಅವರ ಮನಕಲಕುವ ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ಜಾತಿ, ಮತ ಮತ್ತು ಧರ್ಮದ ಎಲ್ಲ ಗಡಿಗಳನ್ನು ದಾಟಿ 1,500 ಕ್ಕೂ ಹೆಚ್ಚು ಮಾನವೀಯ ಹೃದಯವಂತರು ವೈಯಕ್ತಿಕವಾಗಿ ಆಕೆಗೆ ಸಹಾಯಹಸ್ತ ಚಾಚಿದ್ದಾರೆ. ಜಗತ್ತಿನಾದ್ಯಂತ ಇರುವ ದಾಯ್ಜಿವಲ್ಡ್ ಪ್ರಿಯ ಓದುಗರು 400 ರೂಪಾಯಿಂದ 50,000 ರೂಗಳವರೆಗಿನ ಒಟ್ಟು ೩೧ ಲಕ್ಷ ಮೊತ್ತವನ್ನು ಜೆಶ್ಮಾ ಅವರ ಖಾತೆಗೆ ಹಣ ವರ್ಗಾಯಿಸಿದ್ದಾರೆ.
ಸಹಾಯಯಾಚಿಸಿ ದಾಯ್ಜಿವಲ್ಡ್ ನಲ್ಲಿ ಪ್ರಕಟವಾದ ಅನೇಕ ವರದಿಗಳಿಗೆ ಸ್ಪಂದಿಸಿ ಕಳೆದ ಹಲವಾರು ವರ್ಷಗಳಲ್ಲಿ ದಾಯ್ಜಿವಲ್ಡ್ ಓದುಗರು ತಮ್ಮ ಕರುಣೆ - ಕಾಳಜಿಯ ಸಹಾಯಹಸ್ತವೂ ಚಾಚಿದ್ದು, ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಇದೀಗ ಎಲ್ಲಾ ವರದಿಗಳ ಸಹಾಯಧನದ "21 ಕೋಟಿ ರೂಪಾಯಿ" ತಲುಪಿದೆ. ನಮ್ಮ ಕಳಕಳಿಯ ವಿನಂತಿಗೆ ಓದುಗರು ನೀಡುವ ಸಹಾಯಧನ ಸಂತ್ರಸ್ತರ ಖಾತೆಗೆ ನೇರವಾಗಿ ಸೇರುತ್ತಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ.
" ಇದು ನನ್ನ ಜೀವನದಲ್ಲಿ ನಡೆದ ದೊಡ್ಡ ಪವಾಡ. ಭಗವಂತ, ದಾಯ್ಜಿವಲ್ಡ್ ಓದುಗರ ರೂಪದಲ್ಲಿ ಸಹಾಯ ಮಾಡಲು ದೇವತೆಗಳನ್ನು ನನ್ನ ಬಳಿ ಕಳುಹಿಸಿದ್ದಾರೆ ಎಂದು ನಾನು ನಂಬಿದ್ದೇನೆ. ರಕ್ತ ಕ್ಯಾನ್ಸರ್ ನಿಂದ ಬಳುಳುತ್ತಿದ್ದೇನೆ ಎಂದು ಅರಿವಾದಾಗ ಬದುಕುವ ಎಲ್ಲಾ ಭರವಸೆಗಳನ್ನು ಕಳೆದುಕೊಂಡು ದೇವರನ್ನು - ಜೀವನವನ್ನು ಶಪಿಸಿದ್ದೆ. ನನ್ನ ಅಂತಿಮ ದಿನಗಳನ್ನು ಎಣಿಸಲು ಪ್ರಾರಂಭಿಸಿದ್ದೆ ಕೂಡಾ . ಆದರೆ ದಾಯ್ಜಿವಲ್ಡ್ ನ ಪ್ರಧಾನ ಕಚೇರಿಯಿಂದ ಬಂದ ಆ ಒಂದು ಪೋನ್ ಕರೆ , ನನ್ನ ಬದುಕನ್ನೇ ಬದಲಾಯಿಸಿತು. ಚಿಕಿತ್ಸೆಗಾಗಿ ಸಹಾಯಕೋರಿದ ಒಂದು ವಾರದೊಳಗೆ ಪ್ರಕಟವಾದ ಓದುಗರಿಗೆ ಮನವಿ ಮಾಡಿದ ವರದಿ ನನಗೆ ಬದುಕುವ ಭರವಸೆ ನೀಡಿತು. ಆ ಬಳಿಕ ನಡೆದದ್ದೇ ದೊಡ್ಡ ಪವಾಡ . ಓದುಗರು ನನ್ನ ಹೆತ್ತವರಿಗೆ ವಿಶ್ವದ ವಿವಿಧ ಮೂಲೆಗಳಿಂದ ಕರೆ ಮಾಡಿ ನನ್ನ ಶೀಘ್ರ ಚೇತರಿಕೆಗೆ ಹಾರೈಸಿದರು. ನನ್ನ ಖಾತೆಗೆ ಒಟ್ಟು 31 ಲಕ್ಷ ರೂ.ಗಳ ಸಹಾಯ ರೂಪದಲ್ಲಿ ವರ್ಗಾಯಿಸಿದರು ಅದು ನನಗೆ ಹೊಸ ಜೀವನ ನೀಡಿತು.
"ವಿಶ್ವದಲ್ಲಿ ಮಾನವೀಯತೆಯಿಂದ ತುಂಬಿದ ಜನರ ರೂಪದಲ್ಲಿ ಆ ಭಗವಂತ ವಾಸಿಸುತ್ತಾನೆ ಎಂಬುವುದು ಅರಿವಾಯಿತು ”ಎಂದು ಕ್ಯಾನ್ಸರ್ ಪಿಡೀತೆ ಜೇಶ್ಮಾ ಆನಂದ ಭಾಷ್ಮ ಸುರಿಸುತ್ತಾ ಹೇಳುತ್ತಾರೆ.
ಜೆಶ್ಮಾ ಅವರ ಪ್ರತಿ ಕೀಮೋಥೆರಪಿಗೆ 30,000 ರೂ. ಖರ್ಚಾಗುತ್ತದೆ. ಬಡ ಕುಟುಂಬದಲ್ಲಿ ಜನಿಸಿದ ಜೇಶ್ಮಾ ಬಿಎಸ್ಸಿ ಪದವೀಧರರಾಗಿ ಮನೆಗೆ ಆಧಾರಸ್ತಂಭವಾಗುವ ಕನಸು ಕಂಡಿದ್ದಳು ಆದರೆ ಕ್ಯಾನ್ಸರ್ ಆಕೆಯ ಕನಸು ಹೊಸಕಿ ಹಾಕಿತ್ತು. ಆದರೆ ದಾಯ್ಜಿವಲ್ಡ್ ಓದುಗರು ನೀಡಿದ ಸಹಾಯ ಹಸ್ತ ಬದುಕುವ ಹೊಸಭರವಸೆ ಹುಟ್ಟುಹಾಕಿದೆ.
ವಾಸ್ತವವಾಗಿ, ದಾಯ್ಜಿವಲ್ಡ್ ಓದುಗರು ಒಟ್ಟಾಗಿ, ಈ ಜಗತ್ತನ್ನು ಬದಲಾಯಿಸಬಹುದು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಜೆಶ್ಮಾಗೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಪ್ರತಿಯೊಬ್ಬ ವ್ಯಕ್ತಿಗೂ "ನಾವು" ಆಭಾರಿಗಳಾಗಿದ್ದೇವೆ.
ಪ್ರತಿ ಬಾರಿ ನಮ್ಮ ಗೌರವಾನ್ವಿತ ಓದುಗರು ನಾವು ಪ್ರಕಟಿಸುವ ಸಹಾಯಹಸ್ತದ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಅರ್ಥಿಕವಾಗಿ ಹಿಂದುಳಿದ ಅಥವಾ ಸಮಾಜದಲ್ಲಿ ಸಹಾಯದ ತೀವ್ರ ಅಗತ್ಯವಿರುವ ನೋವಿಗೆ ದ್ವನಿಯಾಗುವ ನಮ್ಮ ಪ್ರಯತ್ನಕ್ಕೆ ನಮ್ಮ ಓದುಗರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ಮುಂದುವರಿಸುತ್ತೇವೆ ಎಂದು ನಾವು ಭಾವಿಸುತ್ತೇವೆ. ಎಲ್ಲರಿಗೂ ಪ್ರೀತಿಪೂರ್ವಕ ಕೃತಜ್ಞತೆಗಳು.