ಕಾಸರಗೋಡು,ಡಿ 13(Daijiworld News/MSP): ವೀಸಾ ನೀಡುವುದಾಗಿ ಭರವಸೆ ನೀಡಿ ಬಣ್ಣದ ಮಾತುಗಳಿಂದ ಮರಳು ಮಾಡಿ ಕೇರಳ ಹಾಗೂ ಕರ್ನಾಟಕದ ಹಲವಾರು ಮಂದಿಯಿಂದ ಕೋಟ್ಯಾ೦ತರ ರೂ . ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ನಿವಾಸಿಗಳಾದ ಒಂದೇ ಕುಟುಂಬದ ಮೂವರನ್ನು ಬೇಕಲ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ಪಡೀಲ್ ನ ಡೆನ್ನಿಸ್ ರೊಡ್ರಿಗಸ್ (66) ಮಕ್ಕಳಾದ ವೀಣಾ (30) ಮತ್ತು ಫ್ರಾನ್ಸಿಸ್ ( 22) ಎಂದು ಗುರುತಿಸಲಾಗಿದೆ. ವಂಚನೆಯ ಸೂತ್ರಧಾರನಾಗಿರುವ ಇವರ ಸಂಬಂಧಿಕ ಜೋನ್ ಬಿ.ಡಿಸೋಜ(40) ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ . ಜೋನ್ ವೀಣಾಳ ಪತಿ ಎಂದು ಪೊಲೀಸರು ತಿಳಿಸಿದ್ದಾರೆ .
ಇಂಗ್ಲೆಂಡ್ ನ ವಿವಿಧ ಕಂಪೆನಿಗಳಿಗೆ ಉದ್ಯೋಗ ವೀಸಾ ನೀಡುವುದಾಗಿ ಭರವಸೆ ನೀಡಿ ಇವರು ವಂಚನೆ ನಡೆಸುತ್ತಿದ್ದರು ಎನ್ನಲಾಗಿದೆ. 2018 ರ ಆಗಸ್ಟ್ ನಲ್ಲಿ ವೀಸಾಕ್ಕಾಗಿ ಬೇಕಲ ಪಳ್ಳಿಕೆರೆಯ ತರುಣನ್` ಎಂಬವರು ಎಂಟು ಲಕ್ಷ ರೂ. ನೀಡಿದ್ದರು. ಆದರೆ ಅವಧಿ ಕಳೆದರೂ ವೀಸಾ ಲಭಿಸದೆ ಇದ್ದುದರಿಂದ ವಿಚಾರಿಸಿದಾಗ ತಂಡವು ತಲೆಮರೆಸಿಕೊಡಿರುವುದು ಕಂಡು ಬಂತು. ಹಿನ್ನಲೆಯಲ್ಲಿ ಬೇಕಲಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು . 2017-18 ರ ಅವಧಿಯಲ್ಲಿ ಕಾಸರಗೋಡು , ಕಣ್ಣೂರು , ಎರ್ನಾಕುಲಂ ಮೊದಲಾದೆಡೆ ವೀಸಾ ನೀಡುವ ಭರವಸೆ ನೀಡಿ ಲಕ್ಷಾಂತರ ರೂ. ಹಣ ಪಡೆದು ವಂಚನೆ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಕೇರಳ ಅಲ್ಲದೆ ಕರ್ನಾಟಕದ ಹಲವೆಡೆಗಳಲ್ಲೂ ಇವರು ವಂಚನೆ ನಡೆಸಿದ್ದಾರೆ . ಕೋಟ್ಯಾ೦ತರ ರೂ. ಗಳ ವಂಚನೆ ನಡೆಸಿದ್ದಾರೆ ಎನ್ನಲಾಗಿದೆ. ತಂಡವು ಈ ಹಿಂದೆ ವೀಸಾಕ್ಕಾಗಿ ಸಲ್ಲಿಸಿದ್ದ ದಾಖಲೆಗಳ ಮೂಲಕ ಸಿಮ್ ಕಾರ್ಡ್ ಗಳನ್ನು ಪಡೆದಿರುವುದು ತನಿಖೆ ಯಿಂದ ತಿಳಿದು ಬಂದಿದೆ . ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.