ಕಡಬ, ಡಿ 13 (DaijiworldNews/SM): ಕೇರಳದಲ್ಲಿ ಚಿನ್ನಾಭರಣ ಕಳವು ನಡೆಸಿದ ಆರೋಪಿಯೋರ್ವ ಕಡಬದಲ್ಲಿ ಚಿನ್ನಾಭರಣ ಮಾರಾಟ ಮಾಡಿದ್ದು, ಡಿಸೆಂಬರ್ 13ರ ಶುಕ್ರವಾರದಂದು ಆರೋಪಿಯನ್ನು ಕಡಬಕ್ಕೆ ಕರೆ ತಂದ ಕೇರಳ ಪೊಲೀಸರು ಜ್ಯುವೆಲ್ಲರಿ ಮಳಿಗೆಯಲ್ಲಿ ಆತನನ್ನು ತನಿಖೆ ನಡೆಸಿದ್ದಾರೆ. ಕೇರಳ ಮೂಲದ ಖಾದರ್ ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ.
ಆರೋಪಿ ಖಾದರ್ ನ ಸಹೋದರ ಕಡಬದಲ್ಲಿ ವಾಸವಾಗಿದ್ದ. ಆತನ ಮೂಲಕ ಕಡಬದ ಜ್ಯುವೆಲ್ಲರಿಗೆ ಚಿನ್ನಾಭರಣ ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಕಡಬದಲ್ಲಿ ಚಿನ್ನಾಭರಣ ಮಾರಾಟ ಮಾಡಿರುವುದಾಗಿ ಆತ ತಿಳಿಸಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಕಡಬಕ್ಕೆ ಕರೆದೊಯ್ದು ತನಿಖೆ ನಡೆಸಿದರು. ಈತ ಕಳವುಗೈದ ಚಿನ್ನಾಭರಣಗಳ ಪೈಕಿ ಒಂದಿಷ್ಟು ಭಾಗವನ್ನಷ್ಟೇ ಕಡಬದಲ್ಲಿ ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕಡಬದ ಕೇಪು ನಿವಾಸಿ ಶಾಫಿ ಎಂಬಾತನ ಮೂಲಕ ಕಡಬದ ಜ್ಯುವೆಲ್ಲರಿ ಅಂಗಡಿಗೆ ಚಿನ್ನ ಮಾರಾಟ ಮಾಡಿಸಿದ್ದ. ಮಾರಾಟ ಮಾಡಿದ ಶಾಫಿ ಎಂಬಾತ ಇದೀಗ ನಾಪತ್ತೆಯಾಗಿದ್ದು, ಕಡಬ ಪೊಲೀಸರ ಸಹಕಾರದೊಂದಿಗೆ ಕೇರಳ ಪೊಲೀಸರು ಹುಡುಕಾಡುತ್ತಿದ್ದಾರೆ.