ಶಿಬಾಜೆ, ಡಿ 14 (Daijiworld News/MSP): ಶಿಬಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಲ ಶಾಲಾ ಬಾವಿಗೆ ವಿಷಪ್ರಾಶನ ಪ್ರಕರಣದ ಆರೋಪಿಗಳು ಪತ್ತೆಯಾಗುವ ಮೊದಲೇ ಗ್ರಾಮ ಪಂಚಾಯಿತಿಯ ಪೆರ್ಲ ಸಮೀಪದ ಬಟ್ಟಾಜೆ ಕಪಿಲಾ ನದಿ ದಡದಲ್ಲಿರುವ ಶಿಬಾಜೆ ಗ್ರಾಪಂ ಕುಡಿಯುವ ನೀರಿನ ಟ್ಯಾಂಕ್ ಗೂ ವಿಷಬೆರೆಸಿರುವುದು ಶುಕ್ರವಾರ ಕಂಡುಬಂದಿದೆ. ನೀರು ವಾಸನೆ ಬಂದಿರುವ ಹಿನ್ನಲೆಯಲ್ಲಿ ಗ್ರಾ.ಪಂ ನೀರು ನಿರ್ವಾಹಕ ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಚಿಂತಾಕ್ರಾಂತರಾದ ಗ್ರಾಮಸ್ಥರು
ಈ ಟ್ಯಾಂಕ್ ನಿಂದ ಪಂಪ್ ಮೂಲಕ ನೀರು ಲಿಫ್ಟ್ ಮಾಡಿ ಪೆರ್ಲದಲ್ಲಿರುವ ಇನ್ನೊಂದು ಟ್ಯಾಂಕ್ ಗೆ ತುಂಬಿಸಲಾಗುತ್ತದೆ. ಈ ಟ್ಯಾಂಕ್ ನಿಂದ ಪೆರ್ಲ ಹಿ.ಪ್ರಾ ಶಾಲೆ ಸೇರಿದಂತೆ ಸುತ್ತಲಿನ 70 ಮನೆಗಳಿಗೆ ನೀರು ಪೂರೈಸಲಾಗುತ್ತದೆ.
ಶುಕ್ರವಾರ ಬೆಳಗ್ಗೆ ಟ್ಯಾಂಕ್ ನಿಂದ ಪೂರೈಕೆಯಾದ ನೀರು ದುರ್ವಾಸನೆಯಿಂದ ಕೂಡಿರುವುದು ನೀರು ನಿರ್ವಾಹಕ ನಾರಾಯಣ ಪೂಜಾರಿ ಗಮನಕ್ಕೆ ಬಂದಿದ್ದು, ಪರಿಶೀಲಿಸಿದಾಗ ನೀರು ಕಮಟು ವಾಸನೆ ಬರುತ್ತಿದ್ದುದಲ್ಲದೇ ನೊಣಗಳು ಮುತ್ತಿಕೊಂಡಿರುವುದು ಗಮನಕ್ಕೆ ಬಂದಿದೆ.
ಬಳಿಕ ಅವರು ನದಿ ದಡದ ಟ್ಯಾಂಕ್ ನ್ನು ಪರಿಶೀಲಿಸಿದಾಗ ಅದರೊಳಗಿನ ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ. ಟ್ಯಾಂಕ್ ನ ನೀರು ಬಣ್ಣ ಕಳೆದುಕೊಂಡು ನೊಣಗಳು ಹಾರುತ್ತಿರುವುದು ಕಂಡುಬಂದಿದೆ. ಟ್ಯಾಂಕಿಗೆ ನೀರು ಪೂರೈಸುವ ಪೈಪನ್ನು ನದಿಯಿಂದ ಮೇಲೆತ್ತಿರುವುದು ಹಾಗೂ ನದಿ ದಂಡೆಯಲ್ಲಿ ಹೆಜ್ಜೆ ಗುರುತುಗಳು ಕಾಣುತ್ತಿದೆ.
ಪೆರ್ಲ ಶಾಲಾ ಘಟನೆ ಬೆನ್ನಲ್ಲೇ ಈ ಪ್ರಕರಣ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ವೃತ್ತ ನಿರೀಕ್ಷಕ ಸಂದೇಶ್ ಧರ್ಮಸ್ಥಳ ಠಾಣಾಎಸ್ ಐ ಓಡಿಯಪ್ಪ ಗೌಡ ಭೇಟಿ ನೀಡಿದ್ದಾರೆ.