ಮಂಗಳೂರು, ಡಿ 14 (Daijiworld News/MSP):ಆಕಾಶಗಳಲ್ಲಿ ನಡೆಯುವ ವಿಸ್ಮಯಕಾರಿ ವಿದ್ಯಮಾನಗಳಲ್ಲಿ ಸೂರ್ಯಗ್ರಹಣವು ಒಂದು. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ರೇಖೆಯಲ್ಲಿ ಬಂದಾಗ ಸಂಭವಿಸುವ ಅಪರೂಪದ ವಿದ್ಯಮಾನ ಖಗೋಳ ಪ್ರಿಯರಿಗೆ ಹಬ್ಬ. ಹೌದು ಡಿ.26ರಂದು ಸಂಭವಿಸಲಿದೆ ಅದ್ಭುತ, ರಮ್ಯ "ಕಂಕಣ ಸೂರ್ಯಗ್ರಹಣ" ಕರಾವಳಿಗರಿಗೆ ವಿಶೇಷ.!
ಯಾಕೆಂದರೆ ಸುಮಾರು 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ. ಕರಾವಳಿಯ ಸುಮಾರು 158 ಕಿ.ಮೀ ವ್ಯಾಪ್ತಿಯಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ. ಬೆಳಗ್ಗೆ 8.06 ಕ್ಕೆ ಗ್ರಹಣ ಪ್ರಾರಂಭಗೊಳ್ಳಲಿದ್ದು 9.26 ಕ್ಕೆ ಮಧ್ಯ ಭಾಗಕ್ಕೆ ಬಂದು 11.04ಕ್ಕೆ ಅಂತ್ಯಗೊಳ್ಳಲಿದೆ. ಮೂರು ಗಂಟೆ ಇರಲಿದ್ದು ಉಳಿದೆಡೆ ಇದು ಪಾಶ್ವ ಸೂರ್ಯ ಗ್ರಹಣವಾಗಿರುತ್ತದೆ.
ಕಂಕಣ ಸೂರ್ಯಗ್ರಹಣ ಸುಮಾರು 50 ವರ್ಷಗಳಿಂದೀಚೆಗೆ ಗೋಚರಿಸುತ್ತಿದೆ. ಅದಕ್ಕೂ ಹಿಂದೆ ಗೋಚರಿಸಿದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎನ್ನುತ್ತಾರೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿಗಳು. 2020ರ ಜೂನ್ ನಲ್ಲಿ ಇನ್ನೊಂದು ಸೂರ್ಯಗ್ರಹಣ ನಡೆಯಲಿದ್ದು ಇದು ದಕ್ಷಿಣ ಭಾರತೀಯರಿಗೆ ಕಂಕಣ ಸೂರ್ಯಗ್ರಹಣವಾದರೂ ಕರಾವಳಿಗರಿಗೆ ಪಾಶ್ವ ಸೂರ್ಯಗ್ರಹಣವಾಗಲಿದೆ. ಡಿ 26 ರಂದು ನಡೆಯುವ ಸೂರ್ಯಗ್ರಹಣ ಶೇ.93 ರಷ್ಟು ಗೋಚರಿಸಲಿವೆ.
ಏನಿದು ಕಂಕಣ ಸೂರ್ಯಗ್ರಹಣ?:
ಸೂರ್ಯನ ಬೆಳಕನ್ನು ಭೂಮಿಯ ಮೇಲೆ ಕೆಲಕ್ಷಣ ಬೀಳದಂತೆ ಚಂದ್ರ ಅಡ್ಡ ಬಂದು ತಡೆದು, ಭೂಮಿಯಲ್ಲಿ ಕೆಲ ಪ್ರದೇಶಗಳಲ್ಲಿ ಕತ್ತಲು ಸೃಷ್ಟಿಯಾದರೆ ಸೂರ್ಯ ಗ್ರಹಣ. ಕಂಕಣ ಸೂರ್ಯಗ್ರಹಣವೆಂದರೆ ಚಂದ್ರನ ಬಿಂಬವೂ ಸೂರ್ಯನ ಅಂಚನ್ನು ಮಾತ್ರ ಬಿಟ್ಟು ಉಳಿದೆಲ್ಲಾ ಭಾಗವನ್ನು ಸಂಪೂರ್ಣವಾಗಿ ಅವರಿಸಿಕೊಳ್ಳುತ್ತದೆ . ಈವೇಳೆ ಸೂರ್ಯನ ಸುತ್ತಲೂ ವಿಶಿಷ್ಟವಾದ ವೃತ್ತವೊಂದು ನಿರ್ಮಾಣಗೊಳ್ಳುತ್ತದೆ. ಸೂರ್ಯ ಅಂಚು ಮಾತ್ರ ಪ್ರಜ್ವಲಿಸುತ್ತದೆ. ಇದು ನೋಡಲು ಬಳೆಯಂತೆ ಕಾಣಿಸುವುದರಿಂದ ಇದನ್ನು ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ
ಪಿಲಿಕುಳದಲ್ಲಿ ವಿಶೇಷ ವ್ಯವಸ್ಥೆ:
ಕಂಕಣ ಸೂರ್ಯಗ್ರಹಣವು ಕರಾವಳಿಗರಿಗೆ ಈ ಬಾರಿ ವಿಶೇಷವಾಗಿರುವುದರಿಂದ , ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಪುಣೆಯ ಕುತ್ವಾಲ್ ನಿಂದ 400 ಕನ್ನಡಕಗಳನ್ನು ತರಿಸಲಾಗಿದೆ. ಮಾತ್ರವಲ್ಲದೆ ಪಿನಾಲ್ ಆಪರೇಟರ್ಸ್ ಮೂಲಕವೂ ಗ್ರಹಣ ವೀಕ್ಷಣೆಗೆ ಪಿಲಿಕುಳದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕಾದಿದೆಯಾ ಕಂಟಕ ?:
ಗ್ರಹಣ ಮತ್ತು ಪ್ರಳಯಕ್ಕೆ ಸಂಬಂಧ ಕಲ್ಪಿಸುತ್ತಾ ಬಂದಿದ್ದರೂ ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಆದರೆ ಅಚ್ಚರಿ ಇನ್ನೊಂದೆಡೆ ಹವಾಮಾನ ವೈಪರೀತ್ಯದ ಪರಿಣಾಮ ಕರಾವಳಿಗಳಿಗೆ ಕಂಟಕ ಕಾದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕೇರಳ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ವಿನಾಶಕಾರಿ ಜಲಪ್ರಳಯದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಈ ವರ್ಷಾಂತ್ಯದಲ್ಲಿ ಹಲವೆಡೆ ಸುಮಾರು ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿದೇಶಗಳ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
"ಎಲ್ ನಿನೊ" ಹೆಸರಿನ ಚಂಡಮಾರುತ ಡಿಸೆಂಬರ್ ಕೊನೆಗೆ ಜಪಾನ್ನಲ್ಲಿ ಪ್ರಚಂಡ ಮಳೆಯೊಂದಿಗೆ ಸಮುದ್ರದಲ್ಲಿ ಸುಂಟರಗಾಳಿಗೂ ಕಾರಣವಾಗಲಿದೆ. ಇದು ಭಾರತದ ಕರಾವಳಿ ಪ್ರದೇಶಗಳ ಮೇಲೂ ಪರಿಣಾಮ ಬೀರಲಿದೆ ಎಂದು ಅಕ್ಯೂವೇದರ್ ಸಂಸ್ಥೆಯ ಉಷ್ಣವಲಯ ಹವಾಮಾನ ಪರಿಣಿತ ಡಾನ್ ಕೊಟ್ಲೋವ್ಸ್ಕಿ ಹೇಳಿದ್ದಾರೆ.