ಉಡುಪಿ, ಡಿ 14 (Daijiworld News/MSP): ಉಪ್ಪುಂದ ಸರ್ಕಾರಿ ಹಿರಿಯ ಉರ್ದು ಶಾಲೆಯ ಶಿಕ್ಷರಿಯರಿಬ್ಬರಿಗೆ ಕಿರುಕುಳ ನೀಡಿ ಜೀವಬೆದರಿಕೆ ಹಾಕಿದ್ದ ಎಸ್ಡಿಎಂಸಿ ಅಧ್ಯಕ್ಷರನ್ನು ವಜಾಗೊಳಿಸಿ ಕಠಿಣ ಕ್ರಮಕ್ಕೆ ಕೈಗೊಳ್ಳಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಶಿಕ್ಷಕಿಯಾಗಿದ್ದ ಮಲ್ಲಿಕಾ ಶೆಟ್ಟಿ ಎಂಬವರ ಮೇಲೆ ಅದೇ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಮೋಹನಚಂದ್ರ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಅದೇ ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದ ಮಮತಾ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಲೈಂಗಿಕ ಕಿರುಕುಳ ನೀಡಿ, ಜೀವಬೆದರಿಕೆ ಹಾಕಿದ್ದು ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಮತ್ತೆ ಪ್ರಭಾರ ಶಿಕ್ಷಕಿ ಮಲ್ಲಿಕಾ ಶೆಟ್ಟಿಗೆ ಜೀವಬೆದರಿಕೆ ಹಾಕಿದ್ದ ಈ ಹಿನ್ನಲೆಯಲ್ಲಿ ಬೈಂದೂರು ತಾಲೂಕಿನ ತಹಶೀಲ್ದಾರ್ ಕಚೇರಿ ಮುಂದೆ ಸರ್ಕಾರಿ ನೌಕರರ ಸಂಘಟನೆ ಮತ್ತು ಸಾರ್ವಜನಿಕರಿಂದ ಪ್ರತಿಭಟನೆ ನಡೆಸಿದ್ದರು. ಮಾತ್ರವಲ್ಲದೆ ಎಸ್ ಡಿಎಂಸಿ ಅಧ್ಯಕ್ಷನ ವಿರುದ್ದ ಕ್ರಮ ಕೈಗೊಂಡು ಗಡಿಪಾರು ಮಾಡುವಂತೆ ಆಗ್ರಹಿಸಿದ್ದರು.
ಈ ವಿಚಾರ ಶಿಕ್ಷಣ ಸಚಿವರಿಗೆ ತಿಳಿಯುತ್ತಿದ್ದಂತೆ ಶಿಕ್ಷಕಿಯೊಂದಿಗೇ ನೇರ ಮಾತನಾಡಿ ಸಾಂತ್ವನ ಹೇಳಿದ ಬಳಿಕ ಸಚಿವ ಸುರೇಶ್ಕುಮಾರ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ, ಸಂಬಂಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೇ ಎಸ್ ಡಿ ಎಂಸಿ ಹುದ್ದೆಯಿಂದ ವಜಾಗೊಳಿಸಿ ಕಠಿಣ ಕ್ರಮ ಜರುಗಿಸಲು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ
ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸಚಿವರು ತಾವು ಸ್ಥಳೀಯ ಶಾಸಕರಿಗೂ ಈ ಬಗ್ಗೆ ತಿಳಿಸಿದ್ದು, ಇಂತಹ ಪ್ರಕರಣಗಳಲ್ಲಿ zero tolerance ಇರಬೇಕು. ಎಸ್ ಡಿ ಎಮ್ ಸಿ ಅಧ್ಯಕ್ಷರಿರುವುದು ಶಾಲೆಯ ಅಭಿವೃದ್ದಿಗಾಗಿ ಅವನತಿಗಾಗಿ ಅಲ್ಲ ಎಂದು ಬರೆದುಕೊಂಡಿದ್ದಾರೆ.