ಉಳ್ಳಾಲ, ಡಿ 16(Daijiworld News/MSP): ಫಾಸ್ಟ್ ಟ್ಯಾಗ್ ಕಡ್ಡಾಯ ಹಿನ್ನೆಲೆ ತಲಪಾಡಿ ಟೋಲ್ ಎದುರುಗಡೆ ಸ್ಥಳೀಯರು ಹಾಗೂ ಖಾಸಗಿ ಬಸ್ಸು ಮಾಲೀಕರು ಜಮಾಯಿಸಿ ಎರಡನೇ ದಿನವೂ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನೆಗೆ ಮಣಿದ ಟೋಲ್ ಸಿಬ್ಬಂದಿ ಫಾಸ್ಟ್ ಟ್ಯಾಗ್ ಇಲ್ಲದ, ನಗದು ಪಾವತಿ ಹಾಗೂ ವಿನಾಯಿತಿ ಇರುವ ಸ್ಥಳೀಯರಿಗೆ ಎರಡು ಗೇಟುಗಳನ್ನು ತೆರೆಯುವ ಮೂಲಕ ಒಂದು ಹಂತದಲ್ಲಿ ತೆರೆ ಎಳೆದಿದ್ದಾರೆ.
ಐದು ಗೇಟುಗಳಲ್ಲಿ ಒಂದು ಗೇಟು ಮಾತ್ರ ಸ್ಥಳೀಯ, ನಗದು ಕೊಡುವ ವಾಹನಗಳಿಗೆ ಭಾನುವಾರ ನಿಗದಿ ಮಾಡಲಾಗಿತ್ತು. ಇದರಿಂದಾಗಿ ಸರತಿ ಸಾಲಿನಲ್ಲಿ ವಾಹನಗಳು ನಿಲ್ಲುವ ಮೂಲಕ ವಾಹನ ಸವಾರರು ಪರದಾಡಬೇಕಾಯಿತು. ಖಾಸಗಿ ಬಸ್ಸುಗಳು ಟೋಲ್ ಎದುರುಗಡೆಯೇ ಕೊನೆ ಸ್ಟಾಪ್ ಮಾಡುವ ಮೂಲಕ ಪ್ರಯಾಣಿಕರು ಒಂದು ಕಿ.ಮೀವರೆಗೆ ನಡೆಯುವಂತ ಸ್ಥಿತಿ ನಿರ್ಮಾಣವಾಯಿತು. ಇದನ್ನು ಖಂಡಿಸಿ ಸೋಮವಾರ ಖಾಸಗಿ ಬಸ್ಸು ಮಾಲೀಕರು, ಸಾರ್ವಜನಿಕ ಹಿತರಕ್ಷಣಾ ವೇದಿಕೆ, ಗಡಿನಾಡು ರಕ್ಷಣಾ ವೇದಿಕೆ ಸಮ್ಮುಖದಲ್ಲಿ ಟೋಲ್ ಎದುರುಗಡೆ ಮುತ್ತಿಗೆ ಹಾಕಲಾಯಿತು. ಈ ವೇಳೆ ಟೋಲ್ ಸಿಬ್ಬಂದಿ ಹಾಗೂ ಸಂಘಟನೆಗಳ ನಡುವೆ ವಾಗ್ವಾದ ನಡೆಯಿತು. ಟೋಲ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು , ಸ್ಥಳೀಯ ಬಸ್ಸು ಹಾಗೂ ವಾಹನಗಳಿಗೆ ವಿನಾಯಿತಿ ನೀಡದೇ ಇದ್ದಲ್ಲಿ, ತಲಪಾಡಿಯಿಂದ ಟೋಲ್ ರದ್ದಾಗುವಂತೆ ಅಹೋರಾತ್ರಿ ಕುಳಿತು ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ತಕ್ಷಣಕ್ಕೆ ವಿನಾಯಿತಿ ಹಾಗೂ ಹೆಚ್ಚು ಗೇಟುಗಳನ್ನು ತೆರೆಯುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಎರಡು ಗೇಟುಗಳನ್ನು ತೆರೆಯಲಾಯಿತು.
ಅಲ್ಲದೆ ಖಾಸಗಿ ಬಸ್ಸುಗಳಿಗೆ ಟೋಲ್ ಸುಂಕ ನೀಡುವ ಕುರಿತು ಅಧಿಕಾರಿಗಳ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಸಿಬ್ಬಂದಿ ತಿಳಿಸಿದರು.
ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಮಾತನಾಡಿ, ಟೋಲ್ ನಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ತಲಪಾಡಿಯಲ್ಲಿ ಖಾಸಗಿ ಬಸ್ಸುಗಳಿಗೆ ದುಬಾರಿ ಸುಂಕ ಹಾಗೂ ಒಂದು ಗೇಟ್ ತೆರೆಯುವ ಮೂಲಕ ಜನ ಮುಕ್ಕಾಲು ಕಿ.ಮೀ ನಡೆದುಕೊಂಡು ಹೋಗುವಂತಾಗಿದೆ. ಅಧಿಕಾರಿಗಳಿಗೆ ಸಮಸ್ಯೆ ಗೊತ್ತಾಗುವುದಿಲ್ಲ. ಕಡ್ಡಾಯ ದಿನಾಂಕವನ್ನು ಮುಂದೂಡಿದ್ದರೂ , ಅದನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳು ಏಕಾಏಕಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸ್ಥಳೀಯರನ್ನು ಕರೆದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಹೊರಗಿನ ಕಡೆಯಲ್ಲಿ ದಬ್ಬಾಳಿಕೆ ನಡೆಸಿದರೆ ಜನರೇ ಟೋಲ್ ಅನ್ನು ಹೊಡಿ ಮಾಡುತ್ತಾರೆ. ಇಲ್ಲಿನ ಜನರ ತಾಳ್ಮೆಯನ್ನು ಪರೀಕ್ಷೆ ಮಾಡದಿರಿ. ಬೇಡಿಕೆಗಳಿಗೆ ಸ್ಪಂಧಿಸದೇ ಇದ್ದಲ್ಲಿ 5,000 ಜನ ಸೇರಿಸಿ ಟೋಲ್ ಅನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಕೈ ಹಾಕಬೇಕಾಗಬಹುದು ಎಂದು ಎಚ್ಚರಿಸಿದರು.
ಬೆಂಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕಂಪೆನಿ ಅಧಿಕಾರಿಗಳನ್ನು ಭೇಟಿ ಮಾಡಲಾಗಿದೆ. ಅವರು ಈ ಹಿಂದೆ ಇರುವಂತೆಯೇ ನೀತಿಗಳನ್ನು ಜಾರಿಯಲ್ಲಿಡುವಂತೆ ತಿಳಿಸಿದ್ದರು. ಆದರೆ ತಲಪಾಡಿಯಲ್ಲಿ ಏಕಾಏಕಿ ದಬ್ಬಾಳಿಕೆ ನಡೆಸಲಾಗುತ್ತಿದೆ. 50 ಮೀ ಉದ್ದಕ್ಕೆ 57,000 ರೂ. ಸುಂಕ ಪಾವತಿಸುವಂತೆ ಕಂಪೆನಿ ಹೇಳುತ್ತಿದೆ. ಇದರ ಭಾರವನ್ನು ಸಾರ್ವಜನಿಕರ ಮೇಲೆ ಹೊರಲು ಅಸಾಧ್ಯ. ಅಷ್ಟೂ ಹಣವನ್ನು ಬಸ್ಸು ಮಾಲೀಕರಿಗೆ ಭರಿಸಲು ಅಸಾಧ್ಯ. ಸಮಸ್ಯೆ ಮುಂದುವರಿದಲ್ಲಿ ಒಂದು ಕಿ.ಮೀ ದೂರ ಕೇರಳಕ್ಕೆ ಸ್ಥಳಾಂತರಿಸಲು ಗೊತ್ತಿದೆ ಎಂದು ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಎಚ್ಚರಿಸಿದರು.
ಸರ್ವಿಸ್ ರಸ್ತೆ, ಫ್ಲೈಓವರ್ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಕಾಮಗಾರಿ ಮುಗಿಸದೆ ದುಬಾರಿ ಸುಂಕ ಪಡೆಯುತ್ತಿರುವುದು ಅನ್ಯಾಯ. ಖಾಸಗಿ ಬಸ್ಸುಗಳಿಗೆ ರಿಯಾಯಿತಿ ನೀಡುತ್ತಿದ್ದರು. ಅದನ್ನು ನಿಲ್ಲಿಸುವ ಪ್ರಯತ್ನಗಳಾಗುತ್ತಿದೆ. ನಿಯಮ ಕಡ್ಡಾಯ ಮುಂದೆ ಹೋದರೂ, ಸ್ಥಳೀಯವಾಗಿ ಗೂಂಡಾಗಳನ್ನು ಇಟ್ಟು ಬೆದರಿಸುವ ಕೆಲಸವಾಗುತ್ತಿದೆ. ಕೇಂದ್ರ ಸರಕಾರ ಟೋಲ್ ವಿಚಾರವನ್ನು ಗಣನೆಗೆ ತೆಗೆದುಕೊಂಡು ರದ್ದುಗೊಳಿಸಬೇಕಾಗಿದೆ. ಸ್ಥಳೀಯ ಶಾಲಾ, ಬಸ್ಸು ಹಾಗೂ ವಾಹನಗಳಿಗೆಉಚಿತ ಬಿಟ್ಟುಬಿಡಬೇಕಿದೆ. ಪೊಲೀಸರು ಬೆತ್ತ ಪ್ರಯೋಗಕ್ಕೆ ಸಿದ್ಧರಿದ್ದಾರೆ. ಅವರು ಮನದಲ್ಲಿಟ್ಟುಕೊಳ್ಳಬೇಕಾಗಿದೆ. ಅವೈಜ್ಞಾನಿಕ ಟೋಲ್ ವಿಚಾರವನ್ನು ಮನದಲ್ಲಿಟ್ಟುಕೊಂಡು ಕಾರ್ಯಾಚರಿಸಬೇಕಿದೆ ಎಂದರು - ವಿನಯ ನಾಯ್ಕ್ ಸ್ಥಳೀಯ ಮುಖಂಡ
ಟೋಲ್ ಸಮಸ್ಯೆ ಮುಂದಕ್ಕೆ ಬರಬಾರದು. ಸರಿಯಾಗಿ ಮಾತನಾಡದೆ ಹಣ ವಸೂಲಿ ನಡೆಸುತ್ತಿದೆ. ಉಳ್ಳಾಲ ಪೊಲೀಸರು ಸ್ಥಳೀಯರ ಜತೆಗೆ ನಿಂತು ಸಹಕರಿಸಿ, ಯಾವುದೇ ರೀತಿಯೂ ಎಫ್ ಐಆರ್ ದಾಖಲಿಸಬಾರದು.- ಸಿದ್ದೀಖ್ ತಾ.ಪಂ ಸದಸ್ಯ