ಕುಂದಾಪುರ, ಡಿ 16(Daijiworld News/MSP): ಪೊಲಿಯೋದಿಂದ ಇಡೀ ದೇಹ ಬಲಹೀನವಾಗಿದ್ದರೂ ಕೂಡಾ ಈ ಯುವತಿ ಕೊರಗುತ್ತಾ ಕುಳಿತುಕೊಳ್ಳಲಿಲ್ಲ. ತನಗೆ ತಾನೇ ಗುರುವಾಗಿ ಸ್ವಯಂ ಸ್ಪೂರ್ತಿಯಿಂದ ಕರಕುಶಲ ಕಲೆಯನ್ನು ಸಿದ್ಧಿಸಿಕೊಂಡು ಅದರಲ್ಲಿ ಪ್ರಭುತ್ವ ಸಾಧಿಸುವ ಮೂಲಕ ರಾಜ್ಯದ ಗಮನ ಸಳೆದಿದ್ದಾರೆ.
ಲಲಿತಾ ಅವರು ಇವತ್ತು ಯುವ ಸಮುದಾಯಕ್ಕೆ ಸ್ಪೂರ್ತಿ ಮತ್ತು ಮಾದರಿಯಾಗಿ ಕಾಣಿಸುಕೊಳ್ಳುತ್ತಾರೆ. ಕಟ್ಟುಮಸ್ತಾದ ದೇಹ, ವಿದ್ಯೆ, ಅವಕಾಶಗಳು ಇದ್ದರೂ ಕೂಡಾ ಕೆಲಸ ಮಾಡದ ಅದೆಷ್ಟೋ ಅಲಸ್ಯವಾದಿಗಳ ನಡುವೆ ಲಲಿತಾ ಎನ್ನುವ ಈ ಯುವತಿ ಕೈ ಮತ್ತು ಕಾಲು ದೇಹ ಬಲಹೀನವಾಗಿದ್ದರೂ ಕೂಡಾ ಅದಕ್ಕೆ ಸವಾಲು ಹಾಕಿ ವಿಧವಿಧ ಕರಕುಶಲ ವಸ್ತುಗಳ ಸೃಷ್ಟಿಗೆ ಬೆರಗು ಮೂಡಿಸುತ್ತಿದ್ದಾರೆ. ಇವರ ಸುಪ್ತ ಸಾಧನೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರವಾಗಿದೆ.
ಲಲಿತಾ ಕೊರವಡಿ ಅವರ ದೇಹ ಭಾಗಶಃ ಬಲಹೀನವಾಗಿದೆ. ಕೋಣೆಯಿಂದ ಹೊರಗೆ ಬರಬೇಕಿದ್ದರೆ ತೆವಳಿಕೊಂಡೇ ಬರಬೇಕು. ಹೊರಗಡೆ ಹೋಗಬೇಕಿದ್ದರೆ ಎತ್ತಿಕೊಂಡು ಹೋಗಬೇಕು. ಇಂಥಹ ಸ್ಥಿತಿಯಲ್ಲಿ ಲಲಿತಾ ಎದೆ ಗುಂದದೇ ಸಮಾಜವೇ ಬೆರಗಾಗುವಂತಹ ಸಾಧನೆ ಮಾಡಿದ್ದಾರೆ. ಆಕೆಯ ಚಿತ್ತ, ಕರಚಮತ್ಕಾರದಿಂದ ಜೀವ ಪಡೆದುಕೊಳ್ಳುವ ಆಕೃತಿಗಳು ಅದ್ಬುತ. ಪೇಪರ್ಗಳನ್ನೇ ಮೂಲ ವಸ್ತುವಾಗಿಸಿಕೊಂಡು ಅವರು ರಚಿಸುವ ಅಲಂಕಾರಿಕಾ ವಸ್ತುಗಳು, ಹೂದಾನಿ, ಗೂಡುದೀಪ, ಬಗೆ ಬಗೆ ಹೂವುಗಳು ಕೌತುಕ ಮೂಡಿಸುತ್ತದೆ.
ನಾಲ್ಕು ವರ್ಷದ ತನಕ ಸರಿಯಾಗಿದ್ದ ಲಲಿತಾ ಪೂಜಾರಿ ಅವರಿಗೆ ಕಾಡಿದ ವಿಪರೀತ ಜ್ವರ ಶರೀರದ ಬಲಹೀನತೆಗೆ ಕಾರಣವಾಗಿತ್ತು. ಬಾಲ್ಯದಿಂದಲೇ ಸ್ವಾಭಿಮಾನ, ಸ್ವಾವಲಂಬಿತ್ವವನ್ನು ಮೈಗೂಡಿಸಿಕೊಂಡು ಬೆಳೆದ ಲಲಿತಾ ಅನುಕಂಪಕ್ಕೆ ಅಲವತ್ತುಕೊಳ್ಳಲಿಲ್ಲ. ಅವಕಾಶಕ್ಕಾಗಿ ತುಡಿಯುತ್ತಿದ್ದರು. ಕೈ ಕಾಲುಗಳು ಸ್ವಾಧಿನದಲ್ಲಿ ಇಲ್ಲದಿದ್ದರೂ ಬಲವಂತವಾಗಿ ಆತ್ಮಶಕ್ತಿಯಿಂದ ಕ್ರಿಯಾಶೀಲತೆ ಕಂಡುಕೊಂಡರು. ಮನಸ್ಸಿನಲ್ಲಿಯೇ ವಿಧವಿಧ ಆಕೃತಿಗಳು ಸೃಜನಶೀಲ ರೂಪ ಪಡೆದುಕೊಳ್ಳುತ್ತಿದ್ದವು. ಮನದ ಬೇಸರ, ಏಕತಾನತೆ ಕಳೆದುಕೊಳ್ಳಲು ಆರಂಭಿಸಿದ್ದು ಹತ್ತಿಯ ಬತ್ತಿ ತಯಾರಿ. ಬತ್ತಿ ಹೊಸೆದು ಸ್ಥಳೀಯವಾಗಿ ಮಾರಾಟ ಮಾಡತೊಡಗಿದರು. ನಂತರ ಅಗರಬತ್ತಿ ತಯಾರಿಯನ್ನು ಮಾಡತೊಡಗಿದರು. ಸ್ವತಃ ಸುಗಂಧದ್ರವ್ಯವನ್ನು ಬೆರೆಸಿ ಉತ್ಕೃಷ್ಠ ದರ್ಜೆಯ ಅಗರಬತ್ತಿ ಹೊಸೆದರು. ಕಚ್ಚಾ ವಸ್ತುಗಳ ದುಬಾರಿ ಧಾರಣೆಯಿಂದ ಅದನ್ನು ಮುಂದುವರಿಸಲು ಆಗಲಿಲ್ಲ. ಆಗ ಲಲಿತಾ ಅವರ ಮನದಲ್ಲಿ ಮೂಡಿದ್ದೇ ಕರಕುಶಲ ವಸ್ತುಗಳ ತಯಾರಿ.
ಇದು ದಶಕದ ಹಿಂದಿನ ಕಥೆ. ಯಾವುದೇ ಒಂದು ವಸ್ತುವಿನ ತಯಾರಿಯ ಹಿಂದೆ ತರಬೇತಿ ಇರುತ್ತದೆ. ಆದರೆ ಲಲಿತಾ ಅವರು ಯಾವುದೇ ತರಬೇತಿ ಪಡೆಯದೇ ಸ್ವತಃ ಕಲ್ಪನೆಯಲ್ಲಿ ಪೇಪರ್, ಫಿಶ್ವಯರ್ ಮುಂತಾದವುಗಳಿಂದ ರಚನಾತ್ಮಕ ಆಕೃತಿಗಳನ್ನು ರಚಿಸಿದರು. ಇವರ ಆಸಕ್ತಿ ಮತ್ತು ಉತ್ಸಾಹವನ್ನು ಗಮನಿಸಿದ ಸಹೋದರನ ಪತ್ನಿ ಸರಿತಾ ಸಂತೋಷ್ ಅವರು ಪ್ರೋತ್ಸಾಹಿಸಿದರು. ನಾದಿನಿಯ ಕರಕುಶಲತೆ ಆಲೋಚನೆಗೆ ತಕ್ಕ ಪರಿಕರಗಳನ್ನು ಮಾರುಕಟ್ಟೆಯಿಂದ ತಂದುಕೊಟ್ಟರು. ಇದರಿಂದ ಇನ್ನಷ್ಟು ಪ್ರೇರಿತರಾದ ಲಲಿತಾ ಅವರ ಕರಕುಶಲತೆ ಸೃಷ್ಟಿಶೀಲತೆ ಸೃಜನಾತ್ಮಕತೆ ಪ್ರಭುದ್ದತೆ ಪಡೆದುಕೊಂಡಿತು.
ಲಲಿತಾ ಅವರು ಈಗ ೧೫೦ ಹೆಚ್ಚು ಬಗೆಯ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ವಿವಿಧ ಆಕಾರದ ಬಾಸ್ಕೆಟ್ಗಳು, ಹೂದಾನಿಗಳು, ಗೂಗುಚ್ಛಗಳು, ಗೂಡುದೀಪಗಳು, ಬಾಗಿಲು ಜಾಲ್ಹರಿಗಳು, ವಿವಿಧ ವಿನ್ಯಾಸದ ಅಭರಣಗಳು, ಬಟ್ಟೆಯ ಕಸೂತಿಯ ಬ್ಯಾಗ್ ಹೀಗೆ ಸೂಕ್ಷ್ಮ ಕಸೂತಿಯ ವಿನ್ಯಾಸಗಳು ತಯಾರುತ್ತದೆ. ಇವರು ಒಂದೊಂದು ವಸ್ತು ತಯಾರಿಸಲು ಸಾಕಷ್ಟು ಸಮಯ ತಗೆದುಕೊಳ್ಳುತ್ತಾರೆ. ಕೈಗಳು ಸರಿಯಾಗಿ ಸ್ಪಂದಿಸುವುದಿಲ್ಲವಾದರೂ ಛಲ ಬಿಡದೇ ಸಾಧಿಸುತ್ತಾರೆ. ಕೊಠಡಿಯೊಳಗೆ ಬಣ್ಣ ಬಣ್ಣದ ದಾರ, ಮಣಿ, ನೂಲುಗಳೊಂದಿಗೆ ಕ್ರಿಯಾಶೀಲತೆಗೆ ಕೆಲಸ ಕೊಡುತ್ತಾರೆ.
ಕುಂಭಾಶಿ ಕೊರವಡಿಯ ಮಹಾಬಲ ಪೂಜಾರಿ ಮತ್ತು ಗುಲಾಬಿ ದಂಪತಿಗಳ ಐವರು ಮಕ್ಕಳಲ್ಲಿ ಎರಡನೇಯವರಾದ ಇವರಿಗೆ ಶಾಲೆಗೆ ಹೋಗಲು ಸಾಧ್ಯವಾಗದಿದ್ದರೂ ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಓದು ಬರಹ ಬಲ್ಲವರಾಗಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಇವರು ತಯಾರಿಸಿದ ವಸ್ತುಗಳ ಪ್ರದರ್ಶನವನ್ನು ಸಮೃದ್ದಿ ಮಹಿಳಾ ಮಂಡಳಿ ಚೇರ್ಕಾಡಿ ಇವರು ಮಾಡಲಾಗಿದೆ. ಡಿ.೩ರಂದು ನಡೆದ ವಿಶೇಷ ಚೇತನರ ದಿನಾಚರಣೆಯಲ್ಲಿ ಸನ್ಮಾನಿಸಲಾಗಿದೆ. ಕುಂಭಾಶಿ ಗ್ರಾ.ಪಂ.ನವರು ಗಾಲಿ ಖುರ್ಚಿಯನ್ನು ನೀಡಿದ್ದಾರೆ.
ಇಷ್ಟೇ ಅಲ್ಲ ಇವರು ತೆವಳಿಕೊಂಡೇ ಅಂಗಳದ ಸಮೀಪ ಪುಟ್ಟ ಕೈತೋಟವನ್ನು ಮಾಡಿದ್ದಾರೆ. ಟಾಪೆಯನ್ನೆ ಹಾರೆಯಂತೆ ಬಳಸುತ್ತಾ ಒಂದಿಷ್ಟು ತರಕಾರಿ ಸೊಪ್ಪು ಗಿಡಗಳನ್ನು ಬೆಳೆಯುತ್ತಾರೆ. ದಿನದ ಎರಡು ಗಂಟೆ ಕೈತೋಟದಲ್ಲಿ ಕಾಲಕಳೆಯುವ ಲಲಿತಾ ಉಳಿದ ಸಮಯ ಕರಕುಶಲತೆಯಲ್ಲಿ ಕಳೆಯುತ್ತಾರೆ. ತಾನು ಸಿದ್ಧಿಸಿಕೊಂಡ ವಿದ್ಯೆಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಕು ಎನ್ನುವ ಕನಸು ಇವರದ್ದು. ಸಂಬಂಧಪಟ್ಟ ಇಲಾಖೆಗಳು ಮನಸು ಮಾಡಿದರೆ ಇವರ ಪ್ರತಿಭೆ ರಾಜ್ಯ ಮಟ್ಟದಲ್ಲಿ ಬೆಳಗಬಹುದು.