ಕಾಸರಗೋಡು, ಡಿ 17 (Daijiworld News/PY) : ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೆಲ ಸಂಘಟನೆಗಳು ಡಿ.17ರ ಮಂಗಳವಾರ ಕೇರಳದಲ್ಲಿ ಹರತಾಳಕ್ಕೆ ಕರೆ ನೀಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಹರತಾಳ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹರತಾಳ ಕಾನೂನು ವಿರುದ್ಧವಾಗಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದರೂ ಹರತಾಳ ಬಹುತೇಕ ಯಶಸ್ವಿಗೊಂಡಿದೆ.
ಖಾಸಗಿ, ಕೆ ಎಸ್ ಆರ್ ಟಿ ಸಿ ಬಸ್ಸುಗಳು ರಸ್ತೆಗಿಳಿಯದ ಕಾರಣ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಶಾಲಾ ಪರೀಕ್ಷೆಗಳು ಮುಂದೂಡದಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ತಲುಪಲು ಸಾಧ್ಯವಾಗಿಲ್ಲ. ಪರೀಕ್ಷೆ ಮುಂದೂಡಿಲ್ಲ ಎಂದು ಶಿಕ್ಷಣ ಇಲಾಖಾ ಉಪನಿರ್ದೇಶಕರು ಆದೇಶ ಹೊರಡಿಸಿದ್ದು, ಇದರಿಂದ ಶಾಲೆಗೆ ತಲುಪಲಾಗದ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಹುತೇಕ ಮುಚ್ಚಿವೆ
ಹರತಾಳಕ್ಕೆ ಕರೆ ನೀಡಿದ್ದ ಕೆಲ ಸಂಘಟನೆಗಳ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ. ಎಸ್ ಡಿ ಪಿ ಐ ಮತ್ತು ವೆಲ್ಫೇರ್ ಪಾರ್ಟಿಯ ಹತ್ತರಷ್ಟು ಕಾರ್ಯಕರ್ತರನ್ನು ಮಂಜೇಶ್ವರ , ಕುಂಬಳೆ , ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ .
ಎಸ್ ಡಿ ಪಿ ಐ , ವೆಲ್ಫೇರ್ ಪಾರ್ಟಿ ಸೇರಿದಂತೆ 30ಕ್ಕೂ ಅಧಿಕ ಸಂಘಟನೆಗಳು ಹರತಾಳಕ್ಕೆ ಕರೆನೀಡಿದ್ದು, ಹರತಾಳ ನಡೆಸುವುದಾಗಿ ಪೊಲೀಸರಿಗೆ ನೋಟಿಸ್ ನೀಡಿಲ್ಲ. ಇದರಿಂದ ಈ ಹರತಾಳ ಕಾನೂನು ವಿರುದ್ಧ ಎಂದು ಪೊಲೀಸರು ಘೋಷಿಸಿದ್ದು, ಕಠಿಣ ಕ್ರಮಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ನೀಡಿದ್ದಾರೆ.