ಉಡುಪಿ, ಡಿ 17 (Daijiworld News/MB) : ಅಂಗನವಾಡಿ ಒಳಗೆ ಶಿಸ್ತಿನಿಂದ ಒಳಬಂದವರನ್ನು ಪಿಳಿಪಿಳಿ ಕಣ್ಣಿಬಿಟ್ಟು ನೋಡುತ್ತಿದ್ದ ಮುದ್ದುಮಕ್ಕಳು ಒಂದೆಡೆಯಾದರೆ, ಒಳಬಂದ ಅಧಿಕಾರಿಯನ್ನು ಕಂಡು ಹೆದರಿ ಬೆವರುತ್ತಿದ್ದ ಅಂಗನವಾಡಿ ಸಹಾಯಕಿ ಇನ್ನೊಂದೆಡೆ, ಈ ದೃಶ್ಯ ಕಂಡು ಬಂದದ್ದು, ಕಾರ್ಕಳ ತಾಲೂಕಿನ ಸೂಡ ಗ್ರಾಮದ ಕಾಪಿಕಾಡು ಅಂಗನವಾಡಿ ಕೇಂದ್ರದಲ್ಲಿ, ಈ ಅಂಗನವಾಡಿಯೊಳಗೆ ಶಿಸ್ತಿನಿಂದ ಬಂದ ಅಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು.
ಮಂಗಳವಾರ ಕಾರ್ಕಳ ತಾಲೂಕಿನ ಸೂಡದಲ್ಲಿ ಸ್ಥಳ ಪರಿಶೀಲನೆಗಾಗಿ, ಉಡುಪಿಯಿಂದ ಬೆಳಗ್ಗೆಯೇ ತೆರಳಿದ್ದ, ಜಿಲ್ಲಾಧಿಕಾರಿ ಜಿ.ಜಗದೀಶ್, ತಮ್ಮ ಬಿಡುವಿಲ್ಲದ ಕಾರ್ಯದ ನಡುವೆಯೇ, ಮಾರ್ಗಮಧ್ಯೆ ಕಂಡು ಬಂದ ಅಂಗನವಾಡಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಅಂಗನವಾಡಿಯಲ್ಲಿದ್ದ ಅಂಗನವಾಡಿ ಸಹಾಯಕಿಯನ್ನು ಪ್ರಶ್ನಿಸದೇ, ನೇರವಾಗಿ ಮಕ್ಕಳ ಬಳಿ ತೆರಳಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಮುದ್ದುಮಾತಿನಿಂದ ಅವರನ್ನು ಮಾತನಾಡಿಸಿ, ಏನು ತಿಂದಿರಿ ಎಂದು ಪ್ರಶ್ನಿಸಿದರು, ಈಗ ತಾನೇ ಹಾಲು ಕುಡಿದಿದ್ದೇವೆ ಎಂದು ಮಕ್ಕಳಿಂದ ಉತ್ತರ ಪಡೆಯುವ ಮೂಲಕ, ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಹಾಲು ನೀಡಿರುವುದನ್ನು ಖಾತ್ರಿ ಪಡಿಸಿಕೊಂಡ ಅವರು, ಮಕ್ಕಳಿಗೆ ತಾವೇ ಚಿಕ್ಕಿಯನ್ನು ನೀಡಿದರು.
ಅಂಗನವಾಡಿಯಲ್ಲಿದ್ದ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಡಿಸಿ, ಅಲ್ಲಿನ ಸ್ವಚ್ಛತೆ, ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ, ಆಹಾರ ಪ್ಯಾಕೆಟ್ಗಳ ಮೇಲಿನ ಅವಧಿ ದಿನಾಂಕ ಸೇರಿದಂತೆ ಅಂಗನವಾಡಿಯ ಸಮಗ್ರ ಪರಿಶೀಲನೆ ಹಾಗೂ ಅಂಗನವಾಡಿಯಲ್ಲಿದ್ದ ಸಂಬಂದಪಟ್ಟ ರಿಜಿಸ್ಟ್ರಾರ್ಗಳ ಪರಿಶೀಲನೆ ಸಹ ನಡೆಸಿದರು.
ಉಡುಪಿ ಜಿಲ್ಲೆಯಲ್ಲಿನ 1191 ಅಂಗನವಾಡಿಗಳಲ್ಲಿ ಸ್ವಚ್ಛತೆ, ಮಕ್ಕಳಿಗೆ, ಗರ್ಭಿಣಿ, ಬಾಣಂಂತಿಯರಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಲು, ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದ ತಂಡ ರಚಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಖುದ್ದು ತಾವೇ ಅಂಗನವಾಡಿ ಭೇಟಿ ನಡೆಸಿ, ಪರಿಶೀಲನೆ ನಡೆಸಿದರು.