ಮಂಗಳೂರು, ಡಿ 17 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದೆಲ್ಲೆಡೆ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕರಾವಳಿಯಲ್ಲೂ ಕಾಯ್ದೆಗೆ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಪೌರತ್ವ ಕಾಯ್ದೆ ಕರ್ನಾಟಕದಲ್ಲಿ ಜಾರಿಗೆ ಬಂದಲ್ಲಿ ಕರ್ನಾಟಕ ಹೊತ್ತಿ ಉರಿಯಲಿದೆ ಎಂದಿದ್ದಾರೆ. ಆ ಮೂಲಕ ಉಗ್ರ ಹೋರಾಟ ನಡೆಸುವ ಸುಳಿವನ್ನು ಪರೋಕ್ಷವಾಗಿ ಶಾಸಕ ಯುಟಿ ಖಾದರ್ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪೌರತ್ವ ಕಾಯ್ದೆ ಅನುಷ್ಠಾನದಿಂದ ಇಡೀ ದೇಶ ಹೊತ್ತಿ ಉರಿಯುತ್ತಿದೆ. ಆದರೆ, ಕರ್ನಾಟಕದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆ ತಾಳ್ಮೆಯಿಂದ ಇದ್ದಾರೆ. ಕರ್ನಾಟಕದಲ್ಲೂ ಕಾಯ್ದೆ ಅನುಷ್ಠಾನ ಮಾಡ್ತಾರೆ ಎಂಬ ವಿಚಾರ ಕೇಳಿ ಬರುತ್ತಿದೆ. ಒಂದೊಮ್ಮೆ ರಾಜ್ಯದಲ್ಲೂ ಕಾಯ್ದೆ ಜಾರಿಗೆ ಬಂದಲ್ಲಿ ಕರ್ನಾಟಕ ಹೊತ್ತಿ ಉರಿಯುವ ಪರಿಸ್ಥಿತಿ ಎದುರಾಗಲಿದೆ ಎಂದಿದ್ದಾರೆ.
ಎನ್ ಆರ್ ಸಿ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರಿಗೆ ಮಾಡಬೇಕಾಗಿದೆ. ಯಾಕೆಂದರೆ, ಅವರು ದೇಶವನ್ನು ಹೊಡೆಯಲು ಮುಂದಾಗಿದ್ದಾರೆ. ಬ್ರಿಟಿಷರ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅವರು ಯೋಜನೆಗಳನ್ನು ತರುತ್ತಿದ್ದಾರೆ ಎಂದು ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.