ಮಂಗಳೂರು, ಡಿ 18 (Daijiworld News/MSP): ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದಿನಿಂದ ಡಿ.20 ರ ರಾತ್ರಿ12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಅಯುಕ್ತ ಡಾ.ಪಿ.ಎಸ್ ಹರ್ಷ ಆದೇಶಿಸಿದ್ದಾರೆ.
ಕೇಂದ್ರ ಸರ್ಕಾದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕ ರಾಷ್ಟ್ರೀಯ ನೋಂದಣಿಯನ್ನು ಜಾರಿ ಮಾಡಿರುವ ಹಿನ್ನಲೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಜಾಮೀಯ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಕಾನೂನು-ಸುವ್ಯವಸ್ಥೆ ದಕ್ಕೆ ಆದ ಕಾರಣ ವಿದ್ಯಾರ್ಥಿಗಳ ಮೇಲೆ ಕಾನೂನು ಕ್ರಮ ಕೈಗೊಂಡಿರುವುದನ್ನು ವಿರೋಧಿಸಿ ಮಂಗಳೂರು ನಗರದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಸೇರಿದ ವಿದ್ಯಾರ್ಥಿಗಳು ಅನುಮತಿ ಪಡೆಯದೆ ಏಕಾಏಕಿಯಾಗಿ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿ ವಾಹನ ಸಂಚಾರ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದರು.
ಮಾತ್ರವಲ್ಲದೆ ಕೇಂದ್ರ ಸರಕಾರದ ಪೌರತ್ವ ನೀತಿಯ ವಿರುದ್ಧ ವಿವಿಧ ಸಂಘಟನೆಗಳು ನಗರದಲ್ಲಿ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿ ಇದ್ದು ಮತ್ತು ಪೌರತ್ವ ಸಂರಕ್ಷಣಾ ಸಮಾವೇಶಕ್ಕೆ ಕರ್ನಾಟಕದ ಎಲ್ಲಾ ಸಂಘಟನೆಗಳು ವಿದ್ಯಾರ್ಥಿಗಳು ಭಾಗಿಯಾಗುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ 'ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯರ್' ಕರೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಡಿದೆ. ಜತೆಗೆ ಡಿ.19 ಮತ್ತು 20 ರಂದು ವಿವಿಧ ರಾಜಕೀಯ ಪಕ್ಷ, ಸಂಘಟನೆಗಳು ಅಖಿಲ ಭಾರತ ಬಂದ್ ಕರೆಕೊಟ್ಟಿರುವ ಬಗ್ಗೆ ಮಾಹಿತಿ ಪೊಲೀಸ್ ಇಲಾಖೆಗೆ ಲಭ್ಯವಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯು ಅತಿಸೂಕ್ಷ್ಮ ಪ್ರದೇಶವಾಗಿರುವುದರಿಂದ ಅಂತಹ ಮೆರವಣಿಗೆ ಪ್ರತಿಭಟನೆ ಕಾರ್ಯಕ್ರಮ ನಡೆಸಿದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇದೆ.
ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ನೆಮ್ಮದಿ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಘಟನೆಗಳು ನಡೆಯದಂತೆ ಅವುಗಳನ್ನು ತಡೆಗಟ್ಟುವ ಉದ್ದೇಶದಿಂದ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 144 ರಂತೆ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಆದೇಶಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.