ಮಂಗಳೂರು, ಡಿ 19 (Daijiworld News/MB): ಚಿನ್ನವನ್ನು ಅಕ್ರಮ ಸಾಗಾಟ ಮಾಡುವವರು ಹೊಸ ಹೊಸ ವಿಧಾನ ಹುಡುಕುತ್ತಲ್ಲೇ ಇದ್ದಾರೆ. ಗುದದ್ವಾರದಲ್ಲಿ ಚಿನ್ನವನ್ನು ಅಕ್ರಮ ಸಾಗಾಟ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಆರೋಪಿಗಳು ಅಕ್ರಮ ಚಿನ್ನ ಸಾಗಾಟ ಮಾಡಲು ಬೋಳಿಸಿದ ತಲೆಗೆ ಹಾಕಿದ್ದ ವಿಗ್ ಅನ್ನು ಬಳಸಿದ್ದಾರೆ. ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಟೇಪ್ ಮಾದರಿಯನ್ನು ಬಳಸಿದ್ದು ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು 21.33 ಲಕ್ಷ ಮೌಲ್ಯದ 554.90 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಮೊದಲ ಪ್ರಕರಣದಲ್ಲಿ ಆರೋಪಿಯು ಬೋಳಿಸಿದ ತಲೆಗೆ ವಿಗ್ ಅಂಟಿಸಿ ಅದರೊಳಗೆ ಅಕ್ರಮ ಚಿನ್ನ ಸಾಗಾಟ ಮಾಡಲು ಯತ್ನಿಸಿದ್ದು ತಿಳಿದುಬಂದಿದೆ. ಆರೋಪಿಯು ಮಂಗಳವಾರ ದುಬೈನಿಂದ ವಿಮಾನದ ಮೂಲಕ ಆಗಮಿಸಿದ್ದು ನಿರ್ಗಮನ ಸಂದರ್ಭ ತಪಾಸಣೆ ವೇಳೆ ಆತ 24 ಕ್ಯಾರೆಟ್ ಶುದ್ಧತೆಯ 247.70 ಗ್ರಾಂ ತೂಕದ 9.57 ಲಕ್ಷ ರೂ ಬೆಲೆಯ ಚಿನ್ನವನ್ನು ಸಣ್ಣ ತುಂಡುಗಳ ರೂಪದಲ್ಲಿ ಬಕ್ಕ ತಲೆಯೊಳಗೆ ಅಂಟಿಸಿ ಕೂದಲಿನಿಂದ ಮುಚ್ಚಿರುವುದು ಗಮನಕ್ಕೆ ಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಅಬುದಾಭಿಯಿಂದ ವಿಮಾನದಲ್ಲಿ ಮಂಗಳೂರಿಗೆ ಸೋಮವಾರ ಆಗಮಿಸಿದ್ದ ಆರೋಪಿ 307.90 ಗ್ರಾಂನ 24 ಕ್ಯಾರೆಟ್ ಶುದ್ಧತೆಯ 11.76 ಲಕ್ಷ ಮೌಲ್ಯದ ಚಿನ್ನವನ್ನು ಅಳತೆಗೆ ಬಳಸುವ ಟೇಪ್ ಮಾದರಿಯ ಒಳಗೆ ಚಿನ್ನದ ಪಟ್ಟಿಯನ್ನು ಮರೆಮಾಚಿ ಸಾಗಾಟಕ್ಕೆ ಯತ್ನಿಸಲಾಗಿದೆ.