ಮಂಗಳೂರು, ಡಿ 19(Daijiworld News/MSP): ಪೌರತ್ವ ಕಾಯ್ಧೆ ಬಳಿಕ ಸಾಮಾಜಿಕ ಜಾಲತಾಲದಲ್ಲಿ ಸುಳ್ಳು ಸುದ್ದಿ ಸಹಿತ ತರಹೇವಾರಿ ಸುದ್ದಿಗಳು ಹಬ್ಬುತ್ತಿದ್ದು ಇದರ ವಿರುದ್ದ ನಗರ ಪೊಲೀಸ್ ಆಯುಕ್ತ ಡಾ.ಪಿ ಎಸ್ ಹರ್ಷ ಎಚ್ಚರಿಕೆ ನೀಡಿದ್ದಾರೆ.
ಡಿಜಿಟಲ್ ವಿಧಾನಗಳಾದ ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ದ್ವೇಷವನ್ನು ಹರಡುವುದರ ವಿರುದ್ಧ ಪೊಲೀಸ್ ನೋಟಿಸ್ ಜಾರಿಗೊಳಿಸಲಾಗಿದೆ. ಹೀಗಾಗಿ ವಾಟ್ಸಾಪ್, ಟೆಲಿಗ್ರಾಂ , ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೂಕ್ಷ್ಮ ಸಂದೇಶಗಳನ್ನು ಹರಡಿದರೆ ಅಂತಹ ಗ್ರೂಪ್ ಅಡ್ಮಿನ್’ಗಳ ವಿರುದ್ದ ಎಫ್ ಐ ಆರ್ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ ಎಸ್ ಹರ್ಷ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ನೋಟೀಸ್ ಜಾರಿಗೊಳಿಸಿದ್ದು, " ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಸಂದೇಶಗಳು ಕೆಲವು ಮೊಬೈಲ್ ಸಂಖ್ಯೆಯಿಂದ ಹರಿದಾಡುತ್ತಿದ್ದು, ಕಂಡುಬಂದಿರುತ್ತದೆ. ಇಂತಹ ಸಂದೇಶಗಳ ಮೇಲೆ ಪೊಲೀಸ್ ಇಲಾಖೆಯು ತೀವ್ರ ನಿಗಾವಹಿಸಿರುತ್ತದೆ. ನೀವು ಇಂತಹ ಸಂದೇಶಗಳನ್ನು ರವಾನಿಸಿದಲ್ಲಿ ಕಲಂ 153(ಎ), 295 ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಗ್ರೂಪ್ ಅಡ್ಮಿನ್ ಗಳನ್ನು ನೇರವಾಗಿ ಹೊಣೆಗಾರಿಕೆ ಮಾಡಿ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು " ಎಂದು ಉಲ್ಲೇಖಿಸಲಾಗಿದೆ.