ಮಂಗಳೂರು: ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ - ಸ್ಟೇಟ್ ಬ್ಯಾಂಕ್ ಬಳಿ ಲಘು ಲಾಠಿ ಪ್ರಹಾರ -ಹಲವರ ವಶ
Thu, Dec 19 2019 03:05:41 PM
ಮಂಗಳೂರು, ಡಿ 19(Daijiworld News/MSP): ನಿಷೇಧಾಜ್ಞೆ ಉಲ್ಲಂಘಿಸಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಸ್ಟೇಟ್ ಬ್ಯಾಂಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ತಂಡವೊಂದರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹಲವರನ್ನು ವಶಕ್ಕೆ ಪಡೆದ ಘಟನೆ ಡಿ.19 ರ ಗುರುವಾರ ಮಧ್ಯಾಹ್ನ ನಡೆದಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ನಡುವೆ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯು ಪ್ರತಿಭಟನೆ ನಡೆಸುವ ಸುಳಿವು ಪೊಲೀಸರಿಗೆ ದೊರಕಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಂದೋಬಸ್ತ್ ಕಲ್ಪಿಸಿದ್ದರು. ಆದರೆ ಈ ವೇಳೆಗೆ ಸ್ಟೇಟ್ ಬ್ಯಾಂಕ್ ಬಳಿಯ ಸಿಟಿ ಬಸ್ ನಿಲ್ದಾಣದ ಸಮೀಪ ಗುಂಪು ಜಮಾಯಿಸಿ ಘೋಷಣೆ ಕೂಗತೊಡಗಿದರು. ಈ ವೇಳೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿ ಗುಂಪನ್ನು ಚದುರಿಸಿ ಹಲವರನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.