ಮಂಗಳೂರು, ಡಿ 19(Daijiworld News/MSP): ಮಂಗಳೂರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಸ್ಟೇಟ್ ಬ್ಯಾಂಕ್ ಬಳಿ ಧಿಡೀರ್ ಆಗಿ ನಡೆದ ಪ್ರತಿಭಟನೆ ಹಿಂಸಾಚಾರ ತಿರುಗಿದೆ. 200 ಕ್ಕೂ ಹೆಚ್ಚು ಪ್ರತಿಭಟನಾಕಾರರು ಜಮಾಯಿಸಿದ್ದು ಇದರಲ್ಲಿ ಸುಮಾರು ನಲುವತ್ತು ಜನರ ಗುಂಪೊಂದು ಹೆಲ್ಮೆಟ್ ಧರಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಕಲ್ಲುತೂರಾಟದಿಂದ ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿಯೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಆದರೂ ನಿಷೇಧಾಜ್ಞೆ ಉಲ್ಲಂಘಿಸಿ, ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ ಉದ್ರಿಕ್ತರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟಕ್ಕೆ ನಡೆಸಿದ್ದಾರೆ. ಪೊಲೀಸರು ಅಂಗಡಿ ಮುಂಗಟ್ಟುಗಳು ಮುಚ್ಚಿಸುತ್ತಿದ್ದು ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.