ಮಂಗಳೂರು, ಡಿ 19 (DaijiworldNews/SM): ಮಂಗಳೂರಿನಲ್ಲಿ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಾಂತಿ ಸುವ್ಯವಸ್ತೆಯನ್ನು ಜನತೆ ಕಾಪಾಡಬೇಕು. ಯಾವುದೇ ಕಾರಣಕ್ಕೂ ನಗರದ ಜನ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ನಗರ ಪೊಲೀಸ್ ಆಯುಕ್ತ ಡಾ. ಹರ್ಷಾ ಮಹಾ ನಗರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರಕ್ಕೂ ಅಧಿಕ ಉದ್ರಿಕ್ತರ ಗುಂಪು ಠಾಣೆಯ ಮೇಲೆ ದಾಳಿ ನಡೆಸಿದೆ. ಠಾಣೆಯನ್ನು ಸುತ್ತುವರಿದ ಗುಂಪು ಠಾಣೆಯೊಳಗಿದ್ದ ಸಿಬ್ಬಂದಿಗಳಿಗೆ ಠಾಣೆಯಿಂದ ಹೊರ ಬರಲು ಅವಕಾಶ ನೀಡದೆ ಹಲ್ಲೆ ನಡೆಸಲು ಹಾಗೂ ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದೆ. ಅಂತಿಮವಾಗಿ ಪೊಲೀಸರು ಬಲ ಪ್ರಯೋಗ ಮಾಡಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಉದ್ರಿಕ್ತರು ಮತ್ತೆ ಮುನ್ನುಗ್ಗಿ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಇದರಲ್ಲಿ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನುಳಿದಂತೆ ಸುಮಾರು 20 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಕಮಿಷನರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈಗಾಗಲೇ ಪರಿಸ್ಥಿತಿ ಕೈ ಮೀರಿದೆ. ಈ ಹಿನ್ನೆಲೆಯಲ್ಲಿ ಜನತೆ ಯಾವುದೇ ಕಾರಣಕ್ಕೂ ಬೀದಿಗೆ ಇಳಿದು ಅಹಿತಕರ ಘಟನೆ ನಡೆಸಬೇಡೆ. ಕಾನೂನು ಮೀರಿ ಜನ ವರ್ತಿಸಿದ್ದಲ್ಲಿ ನಾವು ಸುಮ್ಮನಿರುವುದಿಲ್ಲ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಮಹಾ ನಗರದಲ್ಲಿ ನಡೆದ ಘಟನೆಗಳ ಬಗ್ಗೆ ಅನಾವಶ್ಯಕ ಸಂದೇಶಗಳನ್ನು ರವಾನೆ ಮಾಡಿ ಜನತೆಯಲ್ಲಿ ಕೋಮು ದ್ವೇಷಕ್ಕೆ ಕಾರಣರಾದಲ್ಲಿ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈಗಾಗಲೇ ನಗರದಲ್ಲಿ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಪೊಲೀಸರ ಮೇಲೆ ಕೂಡ ಹಲ್ಲೆ, ಕಲ್ಲು ತೂರಾಟ ನಡೆಸಲಾಗಿದೆ. ಮತ್ತೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಯಾರೂ ಕೂಡ ಅವಕಾಶ ನೀಡಬೇಡಿ ಎಂಬುವುದಾಗಿ ಎಚ್ಚರಿಕೆ ನೀಡಿದ್ದಾರೆ.