ಉಳ್ಳಾಲ, ಡಿ 19 (DaijiworldNews/SM): ಮಾಜಿ ಸಚಿವ ಯು.ಟಿ. ಖಾದರ್ ಹೇಳಿಕೆಯಂತೆ ದ.ಕ. ಜಿಲ್ಲೆಯ ಮಂಗಳೂರು ನಗರ ಹೊತ್ತಿ ಉರಿದಿದೆ. ಕರಾವಳಿ ಭಾಗದಲ್ಲಿ ಸಾಮರಸ್ಯದ ವಾತಾವರಣ ಇರುವ ಸಂದರ್ಭದಲ್ಲಿ ನಾಲ್ಕು ಬಾರಿ ಶಾಸಕರಾಗಿ, ಸಚಿವರಾದ ಖಾದರ್ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಂಗಳೂರು ಕ್ಷೇತ್ರದ ಬಿಜೆಪಿ ಘಟಕ ಉಳ್ಳಾಲ ಠಾಣೆಗೆ ದೂರು ನೀಡಿದೆ.
ಬಳಿಕ ತೊಕ್ಕೊಟ್ಟುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ಮುಖಂಡರು, ಶಾಂತವಾಗಿದ್ದ ಕರಾವಳಿಯಲ್ಲಿ ಕೋಮುದ್ವೇಷದ ವಿಷ ಬೀಜ ಬಿತ್ತಿದ ಶಾಸಕ ಖಾದರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಉದ್ರಿಕ್ತ ಹೇಳಿಕೆಯನ್ನು ನೀಡಿರುವ ಅವರು ಕೊಪ್ಪಳದಲ್ಲಿ ಆರಾಮವಾಗಿ ಕುಳಿತಿದ್ದಾರೆ. ಶಾಸಕರಾಗಿರುವ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಇನ್ನು ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಶಾಸಕ ಖಾದರ್, ಈಗಾಗಲೇ ದೇಶದೆಲ್ಲೆ ಈ ಕಾಯ್ದೆಯಿಂದಾಗಿ ಹೊತ್ತಿ ಉರಿಯುತ್ತಿದೆ. ಕರ್ನಾಟಕದಲ್ಲೂ ಈ ಕಾಯ್ದೆ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಒಂದೊಮ್ಮೆ ಕರ್ನಾಟಕದಲ್ಲೂ ಈ ಕಾಯ್ದೆ ಜಾರಿಗೆ ಬಂದರೆ, ಕರ್ನಾಟಕಹೊತ್ತಿ ಉರಿಯಲಿದೆ ಎಂಬುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.