ಮಂಗಳೂರು, ಡಿ 19 (DaijiworldNews/SM): ಮಂಗಳೂರಿನಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗ್ರೆ ನಿವಾಸಿ ನೌಶೀನ್(23) ಹಾಗೂ ಕಂದಕ್ ನಿವಾಸಿ ಜಲೀಲ್(49) ಮೃತ ದುರ್ದೈವಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಬಂದರು ಠಾಣಾ ವ್ಯಾಪ್ತಿಯಲ್ಲಿ ತೀವ್ರ ಸ್ವರೂಪದಲ್ಲಿ ಹಿಂಸಾಚಾರ ನಡೆದಿದ್ದು, ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಸ್ಲಿಂ ಮುಖಂಡರು, ಮೃತಪಟ್ಟವರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ, ಎಲ್ಲಾ ಮುಸ್ಲಿಂ ಸಂಘಟನೆಯವರು ನಗರದಲ್ಲಿ ಶಾಂತಿ ಕಾಪಾಡಬೇಕು. ಯಾವುದೇ ಕಾರಣಕ್ಕೂ ಯಾವುದೇ ಸಂಘಟನೆಯಾಗಲಿ, ಜನತೆಯಾಗಲಿ ಕಾನೂನಿನ ವಿರುದ್ಧ ನಡೆದುಕೊಳ್ಳಬಾರದು. ಶಾಂತಿಯುತವಾಗಿ ಇದ್ದುಕೊಂಡು ಮಂಗಳೂರು ನಗರದ ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.