ಸುಳ್ಯ, ಡಿ 20 (Daijiworld News/PY) : ಅಡಿಕೆ ಸುಲಿಯುವ ಯಂತ್ರದೊಳಗೆ ಕೈ ಸಿಕ್ಕಿ ಹಾಕಿಕೊಂಡು ಮಹಿಳೆಯೊಬ್ಬರು ಅಂಗೈ ಕಳೆದುಕೊಂಡ ಘಟನೆ ಕಳಂಜದಲ್ಲಿ ನಡೆದಿದೆ.
ಲಲಿತಾ ಎಂಬಾಕೆ ಕಳಂಜದ ಮನೆಯೊಂದರಲ್ಲಿ ಕೆಲಸಕ್ಕಿದ್ದರು. ಡಿ.18ರಂದು ಅಡಿಕೆ ಸುಲಿಯುವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅಡಿಕೆ ಯಂತ್ರದಲ್ಲಿರುವ ಸಿಪ್ಪೆ ಬರುವ ಸ್ಥಳಕ್ಕೆ ಕೈ ಹಾಕಿದ್ದು ಆ ವೇಳೆ ಯಂತ್ರಕ್ಕೆ ಕೈ ಸಿಲುಕಿ ಹಾಕಿಕೊಂಡಿದೆ. ಮಣಿಗಂಟಿನವರೆಗೆ ಕೈ ಯಂತ್ರದ ಒಳಗೆ ಹೋಗಿದೆ ಎನ್ನಲಾಗಿದೆ.
ಈ ಸಂದರ್ಭ ಮಹಿಳೆ ಕೂಗಾಡಿದಾಗ ಪಕ್ಕದಲ್ಲೇ ಇದ್ದ ಮತ್ತೊಬ್ಬ ಮಹಿಳೆ ಯಂತ್ರದ ಸ್ವಿಚ್ ಆಫ್ ಮಾಡಿದ್ದಾರೆಯಾದರೂ ಯಂತ್ರದ ಒಳಗಿನಿಂದ ಕೈ ತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಮೆಶಿನ್ ಆಪರೇಟರ್ ಗಳ ಸಹಾಯದಿಂದ ಯಂತ್ರದಿಂದ ಮಹಿಳೆಯ ಕೈ ಯನ್ನು ಹೊರತೆಗೆಲಾಯಿತು. ಬಳಿಕ ಆಕೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಲಲಿತಾ ಅವರದ್ದು ಬಡಕುಟುಂಬವಾಗಿದ್ದು, ಕೂಲಿ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದರು. ಈ ಆಘಾತದಿಂದ ಕುಟುಂಬಕ್ಕೆ ಬರ ಸಿಡಿಬಡಿದಂತಾಗಿದೆ.