ಪುತ್ತೂರು, ಡಿ 20 (Daijiworld News/PY) : ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದ ಕಡಬ ತಾಲೂಕಿನ ಏಳು ಮಂದಿಯನ್ನು ರಕ್ಷಿಸಿದ ಘಟನೆ ನಡೆದಿದೆ.
ಸಕಲೇಶಪುರ ತಾಲೂಕಿನ ಹೊನ್ನೆಹಿತ್ಲು ಎಸ್ಟೇಟ್ ಒಂದರಲ್ಲಿ 2011ರಿಂದ ಸುಮಾರು 8 ವರ್ಷಗಳ ಕಾಲ ಜೀತದಾಳುಗಳಂತೆ ದುಡಿಯುತ್ತಿದ್ದ ಏಳು ಮಂದಿಯನ್ನು ದ.ಕ ಜಿಲ್ಲಾ ದಲಿತ ಸೇವಾ ಸಮಿತಿಯ ಮುಖಂಡರು ರಕ್ಷಿಸಿದ್ದಾರೆ.
ಕೋಡಿಂಬಾಳ ಗ್ರಾಮದ ಪಾಜೋವಿನ ಪರಿಶಿಷ್ಟ ವರ್ಗಕ್ಕೆ ಸೇರಿದ 7 ಮಂದಿ ಸಕಲೇಶಪುರ ತಾಲೂಕಿನ ಹೊನ್ನೆಹಿತ್ಲು ಎಸ್ಟೇಟ್ ಒಂದರಲ್ಲಿ ದುಡಿಯುತ್ತಿದ್ದರು. ಆದರೆ ಎಸ್ಟೇಟ್ ಮಾಲಕ ಇವರಿಗೆ ಸರಿಯಾಗಿ ವೇತನ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಸಂಕಷ್ಟದಲ್ಲಿದ್ದ ಜೀತದಾಳುಗಳ ಬಗ್ಗೆ ಮಾಹಿತಿ ಪಡೆದ ದ.ಕ ಜಿಲ್ಲಾ ದಲಿತ ಸೇವಾ ಸಮಿತಿಯ ನಿಯೋಗವು ಎಸ್ಟೇಟ್ ಗೆ ಭೇಟಿ ಕೊಟ್ಟು, ಸಕಲೇಶಪುರ ತಾಲೂಕಿನ ಹಿರಿಯ ಕಾರ್ಮಿಕ ಅಧಿಕಾರಿಯ ಸಹಾಯದಿಂದ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಡಿ.17ರಂದು ಸಂತ್ರಸ್ತರನ್ನು ಕರೆತರಲಾಯಿತು.