ಮಂಗಳೂರು, ಡಿ 20 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ಹಿಂಸಾಚಾರ ಹಾಗೂ ಇಬ್ಬರ ಬಲಿಗೆ ಸಾಕ್ಷಿಯಾದ ಮಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ನಗರದಲ್ಲಿ ಹೆಚ್ಚಿನ ಕಡೆ ಸಂಪೂರ್ಣವಾಗಿ ನೀರವತೆ ಆವರಿಸಿಕೊಂಡಿದ್ದು, ಶಾಂತಿಯಿಂದಿದೆ. ಡಿ.22ರವರೆಗೆ ಕರ್ಫ್ಯೂ ಜಾರಿಯಲ್ಲಿರುವ ಕಮಿಷನರೇಟ್ ವಲಯದಲ್ಲಿ ಜನ ಸಂಚಾರ, ವಾಹನ ಸಂಚಾರ ವಿರಳವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರೇ ಅಲ್ಲಲ್ಲಿ ತೆರೆದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ.
ಗಡಿಭಾಗ ತಲಪಾಡಿಯಲ್ಲಿ ಪೊಲೀಸರಿಂದ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಉಳ್ಳಾಲ, ತೊಕ್ಕೊಟ್ಟು, ಕೋಟೆಕಾರು, ತಲಪಾಡಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು ಮನೆಯಿಂದ ಹೊರಬರದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಬೀದಿಗಿಳಿದ ಕೆಲವು ಬೈಕ್ ಸವಾರರ ಮೇಲೆ ಲಾಠಿ ಪ್ರಹಾರ ನಡೆದಿದೆ ಎಂದು ತಿಳಿದುಬಂದಿದೆ.
ನಗರದ ಕೇಂದ್ರ ಭಾಗದಲ್ಲಿ ನಿಷೇಧಾಜ್ಞೆ ಇರುವ ಕಾರಣದಿಂದ ಯಾವುದೇ ಬಸ್ ಗಳನ್ನು ಹಾಗೂ ನಗರದ ಓಳಗೆ ವಾಹನ ಪ್ರವೇಶಿಸಲು ಬಿಡುತ್ತಿಲ್ಲ. ಉಡುಪಿ, ಮಣಿಪಾಲ, ಕಾರ್ಕಳದಿಂದ ಮಂಗಳೂರಿಗೆ ಸಂಚರಿಸುವ ಕೇವಲ ಬೆರಳೆಣಿಕೆಯ ಖಾಸಗಿ ಬಸ್ ಗಳು ಸುರತ್ಕಲ್ ವರೆಗೆ ಮಾತ್ರ ಟ್ರಿಪ್ ಕೈಗೊಳ್ಳುತ್ತಿದೆ.