ಕಾರ್ಕಳ, ಡಿ 20 (Daijiworld News/MSP): ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದ ಪ್ರೊ. ಎಂ.ರಾಮಚಂದ್ರ ಹೃದಯಾಘಾತಕ್ಕೆ ಒಳಗಾಗಿ ಶುಕ್ರವಾರ ನಸುಕಿನ ಜಾವದಲ್ಲಿ ದೈವಾಧೀನರಾಗಿದ್ದಾರೆ.
ಮೂಲತಃ ಸುಳ್ಯ ತಾಲೂಕಿನವರಾಗಿದ್ದ ಪ್ರೊ.ಎಂ.ರಾಮಚಂದ್ರ 1939ರಲ್ಲಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಮಂಡೆಕೋಲಿನಲ್ಲಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕಾಸರಗೋಡಿನ ಬಿಇಎಂ ಹೈಸ್ಕೂಲ್ನಲ್ಲಿ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ. 1962ರಲ್ಲಿ ಧಾರಾವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪಡವಿ ಪಡೆದವರು. 1962ರಲ್ಲಿ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿ ಹೊಂದಿದವರಾಗಿದ್ದರೂ, ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದರು. 1997ರಲ್ಲಿ ಕಾರ್ಕಳ ಸಾಹಿತ್ಯ ಸಂಘವನ್ನು ಪ್ರೋ.ಎಂ.ರಾಮಚಂದ್ರ ಅವರು ಸ್ಥಾಪನೆ ಮಾಡಿದ್ದರು. ಅವರು ಕಾಲೇಜಿನ ಸಾಹಿತ್ಯ ಸಂಘದ ಅಧ್ಯಕ್ಷರಾಗಿ, ವಿಚಾರ ಸಂಕೀರ್ಣ, ಕವಿಗೋಷ್ಠಿ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದರು.
ಬಾಡದ ಹೂಗಳು, ನೆನಪಿನ ಸುರಗಿ, ಚಿತ್ರ ಚರಿತ್ರೆ ಇವರ ಪ್ರಮುಖ ಪುಸ್ತಕಗಳು. ಸೇಡಿಯಾಪು ಕೃಷ್ಣಭಟ್ಟರ ಪತ್ರಾವಳಿ ಇವರ ಸಂಪಾದಿತ ಕೃತಿಯಾಗಿದೆ.ಪ್ರಥಮ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳ ಮತ್ತು ಒಂಭತ್ತನೇಯ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರಾಗಿ ದುಡಿದಿದ್ದರು.
ಪ್ರಶಸ್ತಿ ಪುರಸ್ಕಾರ
ಮಣಿಪಾಲ ಅಕಾಡೆಮಿಯ ಸುವರ್ಣ ಮಹೋತ್ಸವ ಪುರಸ್ಕಾರ, ಪೇಜಾವರ ಮಠದ ರಾಮಸೇವಾ ವಿಠಲ ಪ್ರಶಸ್ತಿ, ಶೃಂಗೇರಿ ಶ್ರೀಗಳಿಂದ ಸತ್ಕಾರ, ಎಸ್.ವಿ.ಪರಮೇಶ್ವರ ಭಟ್ ಪ್ರಶಸ್ತಿ, ಆಳ್ವಾಸ್ ನುಡಿಸಿದರು ಪ್ರಶಸ್ತಿ, ಏರ್ಯ ಬೀಡು ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಅವರ ಪಾಲಿಗೆ ಒದಗಿ ಬಂದಿದೆ. 2011ರಲ್ಲಿ ಹಿವೈಷಿಗಳು ಅಭಿಮಾನಿಗಳು, ವಿದ್ಯಾರ್ಥೀಗಳು ಒಟ್ಟು ಸೇರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಮ್ಮಖದಲ್ಲಿ ಚಂದ್ರಮಾ ಅಭಿನಂದನಾ ಗ್ರಂಥ ನೀಡಿ ಸನ್ಮಾನಿಸಲಾಗಿತ್ತು.
ಆಯ್ಕೆಗೊಂಡಿದ್ದರೂ ಪ್ರಶಸ್ತಿ ಸ್ವೀಕರಿಸುವ ಭಾಗ್ಯ ಎದುರಾಗಿಲ್ಲ
ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಪ್ರೊ.ಎಂ. ರಾಮಚಂದ್ರ ಆಯ್ಕೆಯಾಗಿದ್ದರು. ರೂ. 50 ಸಾವಿರ ನಗದು, ಮತ್ತು ಸ್ಮರಣಿಕೆ ಒಳಗೊಂಡಿತ್ತು. 2020 ಜನವರಿ 8ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತೆಳ್ಳಾರು 10ನೇ ಅಡ್ಡ ರಸ್ತೆ ನಿವಾಸಿ
ತೆಳ್ಳಾರು 10ನೇ ಅಡ್ಡ ರಸ್ತೆ ನಿವಾಸಿ ಅಕ್ಷರ ನಿವಾಸದಲ್ಲಿ ಪ್ರೊ.ರಾಮಚಂದ್ರ ವಾಸವಾಗಿದ್ದರು. ಪತ್ನಿ ಶಾರದಾ, ಗಂಡು ಮಕ್ಕಳು ಕೃಷ್ಣರಾಜ್, ರಾಜುಮೋಹನ್ ಅಗಲಿದ್ದಾರೆ.