ಮಂಗಳೂರು, ಡಿ 20 (Daijiworld News/PY) : ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ಗುರುವಾರ ನಡೆದ ಪ್ರತಿಭಟನೆಯ ಪರಿಸ್ಥಿಯನ್ನು ಅವಲೋಕನೆ ಮಾಡಲು ಆಗಮಿಸಿದ್ದ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ಫ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಆಗಮಿಸಿದ್ದ ಕಾಂಗ್ರೆಸ್ ನಾಯಕರುಗಳಾದ ಎಂ ಬಿ ಪಾಟೀಲ್, ಎಸ್ ಆರ್ ಪಾಟೀಲ್, ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಸವರಾಜರಾಯ ರೆಡ್ಡಿ ಸೇರಿದಂತೆ ಆರು ಮಂದಿಯ ಕಾಂಗ್ರೆಸ್ ನಿಯೋಗವನ್ನು ಬಜ್ಪೆ ವಿಮಾನನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಕರ್ಫ್ಯೂ ಜಾರಿಯಾಗಿರುವ ಕಾರಣ ಪೊಲೀಸರು, ಗೋಲಿಬಾರ್ ನಲ್ಲಿ ಮೃತಪಟ್ಟವರ ಮನೆಗೆ ತೆರಳಲು ಮುಂದಾಗಿದ್ದ ಕಾಂಗ್ರೆಸ್ ನಿಯೋಗವನ್ನು ತಡೆದಿದ್ದಾರೆ. ಆದರೆ, ನಗರದಲ್ಲಿ ಉದ್ರಿಕ್ತ ವಾತಾವರಣವಿರುವ ಕಾರಣ ನಗರ ಪ್ರವೇಶಿಸದಂತೆ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ತಡೆಹಿಡಿದ್ದಾರೆ.
ಪೌರತ್ವ ಕಾಯ್ದೆಯ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳಬೇಕಿತ್ತು. ಆದರೆ ಇದಕ್ಕೆ ಅನುಮತಿಯನ್ನು ನಿರಾಕರಿಸಲಾಗಿದ್ದು, ಸಿದ್ಧರಾಮಯ್ಯ ಅವರ ಮಂಗಳೂರು ಪ್ರವಾಸ ರದ್ದಾಗಿದೆ ಎಂದು ತಿಳಿದು ಬಂದಿದೆ.