ಉಳ್ಳಾಲ, ಡಿ 21 (Daijiworld News/MSP): ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಎರಡನೇ ದಿನ ಹೇರಿರುವ ಕರ್ಪ್ಯೂ ಉಳ್ಳಾಲ ಭಾಗದಲ್ಲಿ ಜನರನ್ನು ತೊಂದರೆಗೆ ಸಿಲುಕಿಸಿತು. ಊರಿಗೆ ತೆರಳುವ ವಿದ್ಯಾರ್ಥಿಗಳು, ಮನೆಗಳಲ್ಲಿ ಸಾಮಗ್ರಿಗಳು ಇಲ್ಲದವರು ಹಾಗೂ ವಾಹನ ಸವಾರರು ಇಕ್ಕಟ್ಟಿನಲ್ಲಿ ಸಿಲುಕುವ ವಾತಾವರಣ ನಿರ್ಮಾಣವಾಯಿತು.
ತೊಕ್ಕೊಟ್ಟು, ತಲಪಾಡಿ, ಕುತ್ತಾರು, ದೇರಳಕಟ್ಟೆ, ಕೋಟೆಕಾರು, ತಲಪಾಡಿ, ಉಳ್ಳಾಲ ಭಾಗಗಳಲ್ಲಿ ಬೆಳಗ್ಗಿನ ಕರ್ಪ್ಯೂ ಸಡಿಲಿಕೆ ಅವಧಿಯಲ್ಲಿ ಕೆಲವು ಅಂಗಡಿಗಳನ್ನು ತೆರೆಯಲಾಯಿತು. ಈ ವೇಳೆ ಗ್ರಾಹಕರು ವಸ್ತುಗಳ ಖರೀದಿಗೆ ಮುಗಿಬಿದ್ದರು, ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತವು. ಎರಡು ತಾಸಿನ ಬಳಿಕ ನಿಂತ ಗ್ರಾಹಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ಪೊಲೀಸರು ಲಾಠಿಯೇಟು ನೀಡಿ ಮತ್ತೆ ಬಂದ್ ನಡೆಸುವಂತೆ ಮಾಡಿದರು. ಇದರಿಂದ ಹಲವರು ಸಾಮಗ್ರಿಗಳು ಖರೀದಿಸದೆ ಹಾಗೆಯೇ ವಾಪಸ್ಸಾದರು.
ಕೇರಳ ವಾಹನಗಳಿಗೆ ತಡೆ :
ಕೇರಳದಿಂದ ಬರುವ ಎಲ್ಲಾ ವಾಹನಗಳಿಗೆ ತಲಪಾಡಿಯಲ್ಲಿ ಕರ್ನಾಟಕ ಪೊಲೀಸರು ತಡೆಯೊಡ್ಡಿದರು. ಶುಕ್ರವಾರ ಸಂಜೆಯಿಂದ ಸುಮಾರು 100ಕ್ಕೂ ಅಧಿಕ ಲಾರಿಗಳು ಸಾಲುಗಟ್ಟಿ ನಿಂತಿವೆ. ಲಾರಿ ಚಾಲಕರು ಊಟ, ನೀರಿಲ್ಲದೆ ಒಂದು ದಿನ ಕಳೆದಿದ್ದಾರೆ. ಆಂಬ್ಯುಲೆನ್ಸ್ ಹಾಗೂ ತುರ್ತಾಗಿ ತೆರಳುವ ವಾಹನಗಳಿಗೆ ಪೊಲೀಸರು ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಆಂಬ್ಯುಲೆನ್ಸ್ ಗಳನ್ನು ಬಿಡಲಾಗಿದೆ. ಸ್ಥಳೀಯ ವಾಹನಗಳು ಒಳರಸ್ತೆಗಳ ಮೂಲಕ ತೆರಳುತ್ತಿದ್ದರು. ತೊಕ್ಕೊಟ್ಟುವಿನಿಂದ ಕೇರಳ ಕಡೆಗೆ ತೆರಳುವ ವಾಹನಗಳನ್ನು ಮುಡಿಪು ಮಾರ್ಗವಾಗಿ ತೆರಳುವಂತೆ ತೊಕ್ಕೊಟ್ಟುವಿನಲ್ಲಿ ಗಸ್ತು ನಿರತ ಪೊಲೀಸರು ಕಳುಹಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳ ಪರದಾಟ: ಶನಿವಾರದ ದಿನವಾಗಿರುವುದರಿಂದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಊರಿಗೆ ಹೊರಡಲು ಬೆಳಗ್ಗಿನಿಂದ ವಾಹನಗಳಿಗೆ ಕಾದರೂ ಪ್ರಯೋಜನವಾಗಿಲ್ಲ. ರಸ್ತೆ ಬದಿಗಳಲ್ಲಿ ಗಂಟೆಗಳ ಕಾಲ ಕಾದು ಬೆರಳೆಣಿಕೆ ರಿಕ್ಷಾ ಮೂಲಕ ಮಂಗಳೂರು ರೈಲ್ವೇ ನಿಲ್ದಾಣ ತಲುಪಿದರು. ಕೆಲವು ಸಂಸ್ಥೆಗಳ ಬಸ್ಸಿನ ಮೂಲಕವೇ ವಿದ್ಯಾರ್ಥಿಗಳನ್ನು ರೈಲ್ವೇ ನಿಲ್ದಾಣಕ್ಕೆ ಬಿಡಲಾಯಿತು.