ಬಂಟ್ವಾಳ, ಸೆ16: ಒರ್ವ ಪತ್ರಕರ್ತ ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದುತ್ತಾನೆ. ಎಲ್ಲಿಯಾದರೂ ಜನರು ಅಥಾವ ಅಧಿಕಾರಿಗಳು ಹಾದಿ ತಪ್ಪುತ್ತಿದ್ದರೆ, ಅಂಥವರ ಕಿವಿ ಹಿಂಡಿ ಸರಿದಾರಿಯಲ್ಲಿ ಮುನ್ನಡೆಯುವಂತೆ ಎಚ್ಚರಿಸುವ ಕೆಲಸವನ್ನು ಪತ್ರಕರ್ತ ಮಾಡುತ್ತಾನೆ. ಆದರೆ ಇಲ್ಲೊಬ್ಬ ಪತ್ರಕರ್ತ ಇವೆಲ್ಲವನ್ನೂ ಮೀರಿ ಒಂದು ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಅ ಕೆಲಸ ಮತ್ಯಾವುದು ಅಲ್ಲ, ಒಂದು ಬಡ ಶಾಲೆಯ ಮಕ್ಕಳಿಗೆ ವಾರದಲ್ಲಿ ಒಂದು ದಿನ ಕ್ಷೀರ ಭಾಗ್ಯವನ್ನು ಒದಗಿಸುತ್ತಿರುವುದು. ಕಲಾಸೇವೆಯ ಜೊತೆಗೆ ಸಮಾಜ ಸೇವೆ ಮಾಡುತ್ತಿರುವ ಈ ಪತ್ರಕರ್ತನ ಹೆಸರು, ಶ್ರೀನಿವಾಸ್ ನಾಯಕ್ ಇಂದಾಜೆ.
ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆಯಲ್ಲಿರುವ ಶ್ರೀನಿವಾಸ್ ನಾಯಕ್ ಇಂದಾಜೆ ಪತ್ರಿಕೋದ್ಯಮ ರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ವೃತ್ತಿಯ ಜೊತೆ ಜೊತೆಯಲ್ಲಿಯೇ ಹೈನುಗಾರಿಕೆಯ ಕಾಯಕ ನಡೆಸುತ್ತಿದ್ದಾರೆ. ಹೈನುಗಾರಿಕೆಯ ಈ ವೃತ್ತಿಯಲ್ಲಿ ಬರುವ ಹಾಲಿನ ಸ್ವಲ್ಪ ಪಾಲನ್ನು ಬಂಟ್ವಾಳ ತಾಲೂಕಿನಲ್ಲಿರುವ ಚಂದ್ರಮೌಳಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ದಾನವಾಗಿ ನೀಡುತ್ತಿದ್ದಾರೆ. ಈ ಶಾಲೆ ಬಡ ಮಕ್ಕಳಿಗೆ ಆಸರೆಯಾಗಿದ್ದು, ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಾಗಿ ಈ ಶಾಲೆಯನ್ನು ಅವಲಂಬಿಸಿದ್ದಾರೆ. ಪತ್ರಿಕೋದ್ಯಮದ ಜೊತೆಗೆ ಬಡ ಮಕ್ಕಳಿಗೆ ಸಹಾಯವಾಗಲಿ ಅನ್ನೋ ಸದುದ್ಧೇಶದಿಂದ ಶ್ರೀನಿವಾಸ್ ನಾಯಕ್ ಇಂದಾಜೆ ಹಾಲು ನೀಡುವ ಮೂಲಕ ಸೇವಾ ಕಾರ್ಯ ಮಾಡುತ್ತಿರುವುದು ದಿಟಕ್ಕೂ ಹೆಮ್ಮೆಯ ಸಂಗತಿ.