ಮಂಗಳೂರು: ಡಿ 21 (DaijiworldNews/SM): ಪ್ರತಿಭಟನೆ, ಲಾಠಿಚಾರ್ಜ್, ಆಶ್ರುವಾಯು ಪ್ರಯೋಗ, ಗೋಲಿಬಾರ್... ಗುರುವಾರದಂದು ನಗರದಲ್ಲಿ ನಿಷೇಧಾಜ್ಞೆಯ ನಡುವೆಯೂ ನಡೆದ ಪ್ರತಿಭಟನೆ ಹಾಗೂ ಬಳಿಕ ನಡೆದ ಘಟನೆಗಳಿಂದ ಅಕ್ಷರಶಃ ಕೆಂಡವಾಗಿದ್ದ ಕಡಲ ನಗರಿ ಇದೀಗ ಸಹಜಸ್ಥಿತಿಗೆ ಮರಳುತ್ತಿದೆ. ಶುಕ್ರವಾರ ಹಾಗೂ ಶನಿವಾರದಂದು ಕರ್ಫ್ಯೂ ಬಿಸಿ ಮಹಾನಗರದ ಜನರನ್ನು ಕಾಡಿತ್ತು. ಆದರೆ, ಶನಿವಾರದಂದು ಸಿಎಂ ಬಿ.ಎಸ್. ಯಡಿಯೂರಪ್ಪ ಕರ್ಫ್ಯೂ ಸಡಿಲಗೊಳಿಸುವ ಮೂಲಕ ಉಸಿರುಕಟ್ಟಿ ಕುಳಿತಿದ್ದ ಜನ ನಿಟ್ಟುಸಿರು ಬಿಡುವಂತೆ ಮಾಡಿದೆ.
ಕರ್ಫ್ಯೂ ವಿಧಿಸಿದ ಪರಿಣಾಮದಿಂದಾಗಿ ನಗರದಲ್ಲಿನ ಜನರು ಶುಕ್ರವಾರ ಹಾಗೂ ಶನಿವಾರದಂದು ಪರದಾಡುವಂತಾಯಿತು. ಅನಾರೋಗ್ಯದಿಂದಿದ್ದವರು, ಆಸ್ಪತ್ರೆಗೆ ತೆರಳುವವರು, ತುರ್ತು ಕಾರ್ಯಗಳಿಗೆ ತೆರಳುವವರಂತು ಕರ್ಪ್ಯೂ ಬಿಸಿಯಿಂದಾಗಿ ಕಂಗಾಲಾಗಿದ್ದರು. ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದ ಹಲವು ಮಂದಿ ಅಗತ್ಯ ವಸ್ತುಗಳು ಸಿಗದೆ ಬಸವಳಿದಿದ್ದರು. ಬಹುತೇಕ ನಗರದಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಬ್ರೇಕ್ ಹಾಕಿದ್ದರು. ಇನ್ನು ಸೂಚನೆ ಉಲ್ಲಂಘಿಸಿ ತೆರಳಿದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ನಗರಕ್ಕೆ ತೆರಳುವ ಎಲ್ಲಾ ರಸ್ತೆಗಳಲ್ಲಿ ಗೇಟ್ ಗಳನ್ನು ಹಾಕಿ ವಾಹನಗಳನ್ನು ತಡೆದರು.
ಈ ನಡುವೆಯೇ ಶನಿವಾರದಂದು ಮಂಗಳೂರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಆಗಮಿಸಿದ್ದು ಉಸಿರು ಕಟ್ಟಿ ಕುಳಿತಿದ್ದ ನಗರದ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದರು. ನಗರದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಸಡಿಲಿಕೆಗೊಳಿಸಿದರು. ಶನಿವಾರ ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಆರರ ತನಕ ಕರ್ಫ್ಯೂ ಸಡಿಲಗೊಳಿಸಲಾಗಿತ್ತು. ಈ ವೇಳೆ ಬೆಳಗ್ಗೆಯಿಂದ ಸುಸ್ತಾಗಿದ್ದ ಜನ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮ ಕಾರ್ಯಗಳನ್ನು ಪೂರೈಸಿದರು. ಮಂಗಳೂರು ನಗರದಲ್ಲಿ ಮೂರು ಗಂಟೆಯ ಬಳಿಕ ವಾಹನ ಸಂಚಾರ, ಜನರ ಓಡಾಟ ಜೋರಾಗಿತ್ತು. ಕರ್ಫ್ಯೂ ಸಡಿಲವಾಗುತ್ತಿದ್ದಂತೆ ಅಂಗಡಿ ಮಾಲಕರು ವ್ಯಾಪಾರ ಆರಂಭಿಸಿದರು. ತಮ್ಮ ತಮ್ಮ ಕಾರ್ಯಗಳನ್ನು ಪೂರೈಸಿ ಹಾಗೂ ಅಗತ್ಯ ವಸ್ತುಗಳನ್ನು ಖರೀಧಿಸಿ ಸಂಜೆ ಆರು ಗಂಟೆಯಾಗೋದ್ರೊಳಗೆ ಜನ ಮನೆ ಸೇರಿಕೊಂಡರು. ಇನ್ನು ಸಿಎಂ ಸೂಚನೆಯಂತೆ ಇದೀಗ ಮತ್ತೆ ಸಂಜೆ ಆರು ಗಂಟೆಯಿಂದ ಕರ್ಫ್ಯೂ ಜಾರಿಯಲ್ಲಿದೆ. ಮನೆಯಿಂದ ಹೊರ ನಡೆದ ಜನ ತಮ್ಮ ನಿವಾಸಗಳಿಗೆ ದೌಡಾಯಿಸಿದ್ದಾರೆ. ಈ ನಡುವೆ ನಗರದಲ್ಲಿ ಪೊಲೀಸರು ಮತ್ತೆ ತಮ್ಮ ಕರ್ತವ್ಯಕ್ಕೆ ಮುಂದಾಗಿದ್ದು, ಎಲ್ಲೆಡೆ ಭದ್ರತೆ ಹೆಚ್ಚಿಸಿದ್ದಾರೆ. ನಗರದಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ. ಡಿಸೆಂಬರ್ 22ರ ರವಿವಾರ ಬೆಳಗ್ಗಿನ ತನಕ ಯಾವುದೇ ಕಾರಣಕ್ಕೂ ಜನ ಬೀದಿಗೆ ಬರದೆ ಇಲಾಖೆ ಹೊರಡಿಸಿರುವ ಆದೇಶವನ್ನು ಪಾಲಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಪೊಲೀಸ್ ಸೂಚನೆ ಉಲ್ಲಂಘಿಸಿ ರಸ್ತೆಗಿಳಿದವರ ವಿರುದ್ಧ ಪೊಲೀಸರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವ ಅಗತ್ಯತೆ ಇದೆ.
ಇನ್ನು ಪೊಲೀಸ್ ಇಲಾಖೆ ಕೂಡ ತುರ್ತು ಕಾರ್ಯಗಳಾಗಿರುವ ವೈದ್ಯಕೀಯ, ಚಿಕಿತ್ಸೆಗೆ ತೆರಳುವವರಿಗೆ ತಮ್ಮ ಭದ್ರತೆಯಲ್ಲೇ ವ್ಯವಸ್ಥೆಯನ್ನು ಮಾಡಬೇಕಾಗಿದೆ. ರವಿವಾರದಂದು ಜನರಿಗೆ ಮತ್ತೆ ತಮ್ಮ ತಮ್ಮ ಕಾರ್ಯಗಳನ್ನು ಪೂರೈಸಲು ಅವಕಾಶ ಕಲ್ಪಿಸಲಾಗಿದ್ದು, ಜನತೆ ಶಾಂತಿಯನ್ನು ಕಾಪಾಡಬೇಕಾಗಿದೆ.ಇನ್ನು ಡಿಸೆಂಬರ್ 22ರಂದು ಬೆಳಗ್ಗೆಯಿಂದ ಸಂಜೆ 6 ಗಂಟೆಯ ತನಕ ಕರ್ಫ್ಯೂ ಸಡಿಲಗೊಳಿಸಲಾಗಿದ್ದು ರಾತ್ರಿ ಕರ್ಫ್ಯೂ ಮಂದುವರೆಯಲಿದೆ. ಸೋಮವಾರದಿಂದ ಕರ್ಫ್ಯೂ ತೆರವುಗೊಳಿಸಿ ಸೆಕ್ಷನ್ ಮುಂದುವರೆಯಲಿದೆ.
ಕ್ರಿಸ್ಮಸ್ ಆಚರಣೆಗೆ ಆತಂಕ ಬೇಡ:
ಇನ್ನು ಈ ನಡುವೆ ಕ್ರಿಸ್ಮಸ್ ಹಬ್ಬ ಸಮೀಪಿಸಿದ್ದು, ನಗರದ ಜನತೆಗೆ ಆತಂಕ ಎದುರಾಗಿತ್ತು. ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಬೇಕೆಂದುಕೊಂಡಿದ್ದ ನಗರದ ಕ್ರೈಸ್ತ ಸಮುದಾಯದ ಜನತೆಗೆ ಕಮಿಷನರ್ ಜಾರಿಗೊಳಿಸಿದ್ದ ಕರ್ಫ್ಯೂವಿನಿಂದ ಆತಂಕ ಎದುರಾಗಿತ್ತು. ಹಬ್ಬದ ಸಂಭ್ರಮ ಮಂಕಾಗುವಂತೆ ಮಾಡುವ ಎಲ್ಲಾ ಲಕ್ಷಣಗಳು ನಗರದಲ್ಲಿ ನಡೆದ ಗಲಭೆಯಿಂದಾಗಿತ್ತು. ಆದರೆ, ಕ್ರಿಸ್ಮಸ್ ಹಬ್ಬ ಆಚರಿಸಲು ಯಾವುದೇ ಆತಂಕ ಬೇಡ ಎಂದು ಸಿಎಂ ಭರವಸೆ ನೀಡಿದ್ದಾರೆ. ಕ್ರೈಸ್ತ ಸಮುದಾಯದ ಮುಖಂಡರು ನನ್ನನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಅವರ ಮನವಿಗೆ ನಾನು ಸ್ಪಂದಿಸಿದ್ದೇನೆ. ಯಥಾಸ್ಥಿತಿಯಲ್ಲಿ ಹಬ್ಬ ಆಚರಿಸುವಂತೆ ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಗುರುವಾರದಂದು ಮಂಗಳೂರಿನಲ್ಲಿ ನಡೆದ ಗಲಭೆಯ ಬಳಿಕ ಬೂದಿ ಮುಚ್ಚಿದ ಕೆಂಡದಂತಿದ್ದ ಮಹಾನಗರ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಸಿಎಂ ಆಗಮನ, ಕರ್ಫ್ಯೂ ಸಡಿಲಿಕೆ ನಗರದ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದ್ದು, ನಗರದಲ್ಲಿ ಶಾಂತಿ ಕಾಪಾಡಲು ಎಲ್ಲಾ ಸಮುದಾಯದ ಜನ ಸಹಕರಿಸಬೇಕಾಗಿದೆ.