ಕಾಸರಗೋಡು, ಡಿ 21 (DaijiworldNews/SM): ಗಲಭೆ ಹಾಗೂ ಕರ್ಪ್ಯೂ ಹಿನ್ನಲೆಯಲ್ಲಿ ಮಂಗಳೂರಿನ ಹಾಸ್ಟೆಲ್ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಿಲುಕಿದ್ದ ಕೇರಳದ ನೂರಾರು ವಿದ್ಯಾರ್ಥಿಗಳನ್ನು ವಿಶೇಷ ಬಸ್ಸುಗಳಲ್ಲಿ ಇಂದು ಸಂಜೆ ಕಾಸರಗೋಡಿಗೆ ತಲುಪಿಸಲಾಯಿತು.
ಮಂಗಳೂರಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಊರಿಗೆ ತಲುಪಿಸಲು ಅನುವು ಮಾಡಿಕೊಡುವಂತೆ ಕೇರಳ ಸರಕಾರ ಮನವಿ ಮಾಡಿತ್ತು. ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಮುತುವರ್ಜಿ ವಹಿಸಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬುರವರ ನಿರ್ದೇಶನದಂತೆ ಕೇರಳ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ಮೂಲಕ ಇಂದು ಸಂಜೆ ಏಳು ಗಂಟೆ ಸುಮಾರಿಗೆ ವಿದ್ಯಾಥಿಗಳನ್ನು ಕಾಸರಗೋಡಿಗೆ ಕರೆತರಲಾಯಿತು.
ಪಂಪ್ ವೆಲ್ ನಿಂದ ಐದು ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರ ಬೆಂಗಾವಲಿನಲ್ಲಿ ಕಾಸರಗೋಡಿಗೆ ತಲುಪಿಸಿದ್ದು, ಕಂದಾಯ ಸಚಿವ ಇ. ಚಂದ್ರಶೇಖರನ್, ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ವಿದ್ಯಾರ್ಥಿಗಳನ್ನು ಬರಮಾಡಿ ಕೊಂಡರು. ಕಾಸರಗೋಡು ಹಾಗೂ ರಾಜ್ಯದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿದ್ದು, 300ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಸರಗೋಡಿಗೆ ತಲಪಿಸಿ ಬಳಿಕ ಅವರ ಊರಿಗೆ ತೆರಳಲು ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿತು.
ಇಂದಿನಿಂದಲೇ ಊಟ, ಆಹಾರದ ಕೊರತೆ ಉಂಟಾಗಿತ್ತು. ಹಾಸ್ಟೆಲ್ ಕ್ಯಾಂಟೀನ್ ಗಳಿಂದ ಕಳೆದ ಎರಡು ಮೂರು ದಿನಗಳಿಂದ ಆಹಾರ ಲಭಿಸಿತ್ತು. ಇನ್ನೂ ಅಲ್ಲಿ ಉಲಿಯುತ್ತಿದ್ದರೆ ಆಹಾರಕ್ಕೂ ಸಮಸ್ಯೆ ತಲೆದೋರುತ್ತಿತ್ತು. ಕೇರಳ ಸರಕಾರ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ಕ್ರಮವನ್ನು ವಿದ್ಯಾರ್ಥಿಗಳು ಶ್ಲಾಘಿಸಿದರು. ಇನ್ನು ಯಾರಾದರೂ ವಿದ್ಯಾಥಿಗಳು ಹಾಸ್ಟೆಲ್ ಗಳಲ್ಲಿ ಸಿಲುಕಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ ಊರಿಗೆ ಕರೆ ತಾಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.