ಮಂಗಳೂರು, ಡಿ 21 (DaijiworldNews/SM): ಮಂಗಳೂರಿನಲ್ಲಿ ಘರ್ಷಣೆಗೆ ಮಾಜಿ ಸಚಿವ ಯು.ಟಿ. ಖಾದರ್ ಕಾರಣವೆಂದು ಬಿಜೆಪಿ ಪಕ್ಷದ ನಾಯಕರು ಆರೋಪಿಸುತ್ತಿದ್ದಂತೆ ಮಂಗಳೂರಿನಲ್ಲಿ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಭಾವನೆ ಏನಿದೆ ಅದನ್ನಷ್ಟೆ ನಾನು ತಿಳಿಸಿದ್ದೇನೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರತಿಪಕ್ಷದ ಮುಖಂಡರು ಪದೇ ಪದೇ ಅದನ್ನೇ ಎತ್ತಿ ತೋರಿಸಿ ಅದೇ ಕಾರಣ ಅಂತ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಅಂತ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಮಾತನ್ನು ಹೇಳಿದ್ದೇನೆ. ಮೂರ್ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸರಕಾರ ಈ ಬಗ್ಗೆ ಸಭೆ ಕರೆದು ಸ್ಪಷ್ಟತೆ ನೀಡುವ ಕೆಲಸ ಮಾಡಿಲ್ಲ. ಜನರಲ್ಲಿ ಭಯವನ್ನು ತಿಳಿಗೊಳಿಸುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ಈ ಕಾಯ್ದೆಯಡಿ ಇಲ್ಲಿರುವ ಮೂಲನಿವಾಸಿಗಳ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ? ಅಪಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದ ಯಾರಿಗೂ ಪೌರತ್ವ ಕೊಡುವುದಿಲ್ಲ ಎಂಬುವುದು ಸರಿ. ಆದ್ರೆ ಕೇವಲ ಮುಸ್ಲಿಮರಿಗೆ ಕೊಡುವುದಿಲ್ಲ ಅನ್ನುವುದು ಯಾಕೆ? ಈ ಎಲ್ಲಾ ಗೊಂದಲ, ಪ್ರಶ್ನೆಗಳಿಗೆ ಉತ್ತರಿಸುವ ಕೆಲಸವನ್ನು ಸರಕಾರ ಮಾಡಬೇಕು ಅಂತ ಆಗ್ರಹಿಸಿದರು. ಇನ್ನು ಮಂಗಳೂರಿನಲ್ಲಿ ನಡೆದ ಗಲಭೆಯ ಬಗ್ಗೆ ತನಿಖೆಯಾಗಬೇಕು ಅಂತ ಆಗ್ರಹಿಸಿದರು.