ಮಂಗಳೂರು, ಡಿ 22 (Daijiworld News/PY) : 'ಪೌರತ್ವ ಮಸೂದೆಯ ವಿರುದ್ದ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಹಾಗೂ ಪೊಲೀಸರು ನಡೆಸಿದ ಗೋಲಿಬಾರ್ಗೆ ಇಬ್ಬರು ಬಲಿಯಾಗಲು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರವೆ ಕಾರಣ, ಈ ವಿಚಾರದ ಬಗ್ಗೆ ನ್ಯಾಯಾಧೀಶರು ತನಿಖೆ ಮಾಡಬೇಕು' ಎಂದು ಮಾಜಿ ಸಚಿವ ಬಿ. ರಮಾನಾಥ್ ರೈ ತಿಳಿಸಿದ್ದಾರೆ.
ನಗರದಲ್ಲಿ ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ, ರಮಾನಾಥ್ ರೈ, 'ದೇಶದಲ್ಲಿ ಇದೀಗ ಪೌರತ್ವ ಮಸೂದೆಯ ಬಗ್ಗೆ ಹಾಗೂ ಎನ್ಆರ್ಸಿ ಯ ಕುರಿತಾಗಿ ತೀವ್ರವಾದ ವಿರೋಧ ನಡೆಯುತ್ತಿದೆ. ರಾಜ್ಯದಲ್ಲಿ ಶಾಂತಿಯುತವಾದ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಸೆಕ್ಷನ್ 144ನ್ನು ಜಾರಿಗೊಳಿಸಿದ್ದು ತಪ್ಪು. ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರ ಸರಿಯಾಗಿಲ್ಲ, ಗೋಲಿಬಾರ್ ವೇಳೆ ಬಲಿಯಾದ ಇಬ್ಬರ ಸಾವಿಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರೇ ಕಾರಣ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಸಂತ್ರಸ್ತರನ್ನು ಭೇಟಿ ಮಾಡಲು, ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಅವಕಾಶ ನೀಡಿದ್ದಾರೆ, ಆದರೆ ವಿಪಕ್ಷದವರಿಗೆ ಸಂತ್ರಸ್ತರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ, ಈ ರೀತಿಯಾದ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುತ್ತೇನೆ, ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರು ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದಿಲ್ಲ, ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಆರೋಪಿಗಳಾಗಿರುವುದು ಕೋಮುವಾದಿ ಪಕ್ಷದವರು ಎಂದು ರಮಾನಾಥ್ ರೈ ಹೇಳಿದ್ದಾರೆ.