ಪುತ್ತೂರು, ಡಿ 23 (Daijiworld News/MSP): ಮಂಗಳೂರಿನಲ್ಲಿನ ನಡೆದ ಹಿಂಸಾಚಾರದ ಪ್ರತಿಭಟನೆಗೆ ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ನೀಡಿದ ಪ್ರಚೋದನಾಕಾರಿ ಹೇಳಿಕೆಯೇ ಕಾರಣ ಹೀಗಾಗಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಖಾದರ್ ಅವರ ಪ್ರಚೋದನಕಾರಿ ಹೇಳಿಕೆಯೇ ಮಂಗಳೂರಿನಲ್ಲಿ ಹಿಂಸಾತ್ಮಕ ಘಟನೆಗೆ ಕಾರಣವಾಗಿದೆಯಲ್ಲದೆ ಮಂಗಳೂರಿನಲ್ಲಿ ಗೋಲಿಬಾರ್ ಹಾಗೂ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಾಗಲು ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಿದೆ.
ಶಾಂತಿಯುತವಾಗಿದ್ದ ದ.ಕ. ಜಿಲ್ಲೆಯಲ್ಲಿ ಒಂದು ಸಮುದಾಯದವರನ್ನು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ವಾಸ್ತವ ಅಂಶವನ್ನು ಮರೆಮಾಚಿ ಪ್ರತಿಭಟನೆ ಮತ್ತು ದಂಗೆಗೆ ಇಳಿಯುವಂತೆ ಖಾದರ್ ಅವರ ಹೇಳಿಕೆ ಕಾರಣವಾಗಿದೆ. ಜಿಲ್ಲೆಗೆ ಮತ್ತು ರಾಜ್ಯಕ್ಕೆ ಬೆಂಕಿ ಹಂಚುವಂತೆ ಮತ್ತು ಅಶಾಂತಿ ನಿರ್ಮಾಣ ಮಾಡುವಂತೆ ಶಾಸಕ ಯು.ಟಿ. ಖಾದರ್ ಅವರು ಹೇಳಿಕೆ ನೀಡಿರುವುದೇ ಡಿ.19ರ ಬಳಿಕ ಮಂಗಳೂರು ಮತ್ತು ದ.ಕ. ಜಿಲ್ಲೆಯಲ್ಲಿ ನಡೆದ ಎಲ್ಲಾ ಘಟನೆಗಳಿಗೆ ಕಾರಣವಾಗಿದೆ ಎಂದು ಹಿಂದೂ ಸಂಘಟನೆಗಳು ದೂರಿನಲ್ಲಿ ತಿಳಿಸಿವೆ. ಬಜರಂಗದಳದ ಪುತ್ತೂರು ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ ಅವರು ಡಿ.21ರಂದು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ