Karavali
ಮಂಗಳೂರು: 'ಪ್ರತಿ ವ್ಯಕ್ತಿಯು ದೇವರು ನಮ್ಮ ನಡುವೆ ಇಟ್ಟಿರುವ ಬೆಲೆಬಾಳುವ ನಿಧಿ'- ಬಿಷಪ್ ಅವರಿಂದ ಕ್ರಿಸ್ಮಸ್ ಸಂದೇಶ
- Mon, Dec 23 2019 01:23:21 PM
-
ಮಂಗಳೂರು ಡಿ 23 (Daijiworld News/MB) : ಮಂಗಳೂರು ಧರ್ಮಪ್ರಾತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಸಂದೇಶವನ್ನು ನಾಡಿನ ಜನತೆಗೆ ನೀಡಿದ್ದಾರೆ.
ನಗರದ ಬಿಷಪ್ ಹೌಸ್ ನಲ್ಲಿ ನಡೆದ ಪತ್ರಕರ್ತರೊಂದಿಗೆ ಕ್ರಿಸ್ಮಸ್ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, "ಪ್ರಿಯ ಮಿತ್ರರೇ, ತಮಗೆಲ್ಲರಿಗೂ ಯೇಸು ಕ್ರಿಸ್ತರ ಜನನದ ಶುಭಾಷಯಗಳು.ದೇವರ ಪುತ್ರರಾದ ಯೇಸು ಕಂದ, ಬಡತನ, ಧೀನತೆ ಮತ್ತು ಸ್ವತ್ಯಾಗದಲ್ಲಿ ಜನಿಸಿದರು. ಗೋದಲಿಯಲ್ಲಿ ಜೋಸೆಫ್ ಮತ್ತು ಮರಿಯ ಅವರೊಡನೆ ಯೇಸು ಕಂದನ ಮೂರ್ತಿಯನ್ನಿಟ್ಟಾಗ ಎಲ್ಲವೂ ಅರ್ಥಭರಿತವಾಗುತ್ತದೆ, ಜೀವ ತುಂಬಿದಂತಾಗುತ್ತದೆ, ಎಲ್ಲವೂ ಮಹತ್ವದ್ದಾಗುತ್ತದೆ. ಯೇಸುವನ್ನು ಅಲ್ಲಿಂದ ತೆಗೆದಾಗ ಅದು ಕೇವಲ ಒಂದು ಗ್ರಾಮೀಣ ಬದುಕಿನ ಚಿತ್ರಣವಾಗುತ್ತದೆ. ಯೇಸುವು ನಮ್ಮ ಜೀವನಕ್ಕೆ ಮತ್ತು ಸುತ್ತಮುತ್ತಲಿಗೆ ಅರ್ಥ ತುಂಬುವವರಾಗುತ್ತಾರೆ.
ಯೇಸು ಕ್ರಿಸ್ತರು ಜನಿಸಿದ ಆ ಕಾಲದಲ್ಲಿ ರೋಮನ್ನರು ಸಾಮಾನ್ಯ ಬಡ ಜನರ ವಿರುದ್ಧ ಎಲ್ಲಾ ರೀತಿಯ ಬಲ ಪ್ರಯೋಗ ಮಾಡುತ್ತಿದ್ದರು ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಅವರನ್ನು ಕೊಲ್ಲುತ್ತಿದ್ದರು. ಶೋಷಣೆಯು ಎಷ್ಟು ಬೆಳೆದಿತ್ತೆಂದರೆ ಜನರು ಹೊರಬರಲಾರದಂತಹ ಕೊಳವೆಯೊಳಗೆ ಜೀವಿಸಿದ್ದಂತಿತ್ತು. ಅಂದಿನ ವಾಸ್ತವಿಕ ಕತ್ತಲೆಯಲ್ಲಿ ಹೊಸ ಭರವಸೆ ತುಂಬಲು ಮತ್ತು ಹೊರದಬ್ಬಲ್ಪಟ್ಟವರು ಹಾಗೂ ಶೋಷಿತರು ಘನತೆಯಿಂದ ಜೀವಿಸಲು ಅನುವು ಮಾಡಿಕೊಡಲು ಯೇಸು ಜನಿಸಿದರು. ಯೇಸುವಿನಲ್ಲಿ ಮಾನವನ ಜೀವನವು ನಿಜ ಅರ್ಥ ಮತ್ತು ಅಭಿವೃದ್ಧಿಯನ್ನು ಹುಡುಕುವತ್ತ ಸಾಗುತ್ತದೆ. ಅವರು ಕಟ್ಟಕಡೆಯ ವ್ಯಕ್ತಿಯ ಮಿತ್ರರಾಗುತ್ತಾರೆ. ಯೇಸುವು ನಿಜವಾಗಿ ಪ್ರಪಂಚವನ್ನು ಬೆಳಗಿಸುವ ನಕ್ಷತ್ರ. ಪ್ರತಿ ವ್ಯಕ್ತಿಯ ನಿಜವಾದ ಘನತೆಯು ಯೇಸುವಿನ ವ್ಯಕ್ತಿತ್ವದಲ್ಲಿ ಪ್ರಜ್ವಲಿಸುತ್ತದೆ ಎಂದು ಕ್ರಿಸ್ತ ವಿಶ್ವಾಸಿಗಳು ನಂಬುತ್ತಾರೆ. ಆಕೆಗೆ ಜನಿಸಲಿರುವ ಕಂದನು ದೇವರ ಪುತ್ರನೆಂದು ದೇವದೂತ ಗಬ್ರಿಯೇಲನು ಮರಿಯಮ್ಮರಿಗೆ ಶುಭ ಸಂದೇಶವನ್ನಿತ್ತನು. ದೇವರು ಮಾನವನಾಗಲು ಮತ್ತು ಮಾನವನಾಗುವಿಕೆಯನ್ನೇ ಆರಿಸಿದ್ದೆಂದಾರೆ ಪ್ರತಿ ವ್ಯಕ್ತಿಯೂ ಆ ದೇವರ ನಿಜವಾದ ಪ್ರತಿರೂಪ. ಪ್ರತಿ ಮಗುವೂ, ಗರ್ಭದೊಳಗಿರಲಿ- ಹೊರಗಿರಲಿ, ಅಥವಾ ಬೆಳೆದ ವ್ಯಕ್ತಿಯಾಗಿರಲಿ ಅಥವಾ ಮರಣಕ್ಕೆ ಸಮೀಪಿಸಿದ್ದಿರಲಿ, ಆತನಲ್ಲಿ ಬೇರ್ಪಡಿಸಲಾಗದಂತಹ ಘನತೆ ಮತ್ತು ಹಕ್ಕು ಇರುವುದು. ಯೇಸುವಿನೊಡನೆ, ದೇವರು ಕೇವಲ ಒಂದು ಕಲ್ಪನೆಯಲ್ಲ; ಆತನ ಜನನದ ಪವಾಡದ ಮೂಲಕ, ದೇವರು ತಾನು ಬೌತಿಕ ಪ್ರಪಂಚದಲ್ಲಿ ಬೆರೆತಿರುವುದುದಾಗಿ ತೋರ್ಪಡಿಸುತ್ತಾರೆ. ಅವರಿಗೆ ನಮ್ಮ ಪ್ರತಿಯೊಬ್ಬರ ವಿಚಾರವಾಗಿ ಕಾಳಜಿಯಿದೆ. ಕನ್ಯಾಮರಿಯಮ್ಮನವರಲ್ಲಿ ಜನಿಸುವುದರಮೂಲಕ ಅವರು ಒಂದು ಹೊಸ ಸೃಷ್ಟಿಯನ್ನು ಆರಂಭಿಸಿದ್ದಾರೆ.
ಹೀಗಿರಲು, ಯಾವುದೇ ಹಂತದಲ್ಲಿರುವ ಮನುಷ್ಯ ಜೀವವನ್ನು ಗೌರವಿಸೋಣ. ಜೀವವನ್ನು ತಡೆಯುವುದು ಬೇಡ; ಅದನ್ನು ಬೆಳೆಯಲು ಬಿಡೋಣ.ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಗರ್ಭಪಾತವನ್ನು ಪ್ರತಿಪಾದಿಸುತ್ತಿರುವುದು ನಮಗೆ ತಿಳಿದಿದೆ. ಒಂದು ವೇಳೆ ಪುತಲೀಬಾಯಿಯವರು ಹಾಗೆ ಮಾಡುವುದಾಗಿ ನಿರ್ಧರಿಸಿದ್ದುದಾದಲ್ಲಿ ಮಹಾತ್ಮಾ ಗಾಂಧೀಜಿಯವರು ಇರುತ್ತಿರಲಿಲ್ಲ. ಹಾಗೆನೇ ಭೀಕರ ರೋಗರುಜಿನಗಳಿಂದ ಬಳಲುತ್ತಿರುವವರ ಕಷ್ಟಗಳನ್ನು ಕೊನೆಗೊಳಿಸಲು ದಯಾಮರಣ ಉತ್ತಮ ಆಯ್ಕೆ ಎನ್ನುವವರಿದ್ದಾರೆ. ಒಂದು ವೇಳೆ ಸುಮಾರು 50 ವರ್ಷಗಳ ಕಾಲ ಅಮಿಯೋ ಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಎಂಬ ರೋಗದಿಂದ ಬಳಲುತ್ತಿದ್ದ ಸ್ಟೀಫನ್ ಹಾವ್ಕಿಂಗ್ ಅವರಿಗೆ ದಯೆಯನ್ನು ತೋರಿಸುವ ವಿಧಾನವೆಂದು ದಯಾಮರಣದ ಮೂಲಕ ಅವರ ಜೀವವನ್ನು ಅಂತ್ಯಗೊಳಿಸಿದ್ದಿದರೆ ನಾವೊಬ್ಬ ಶ್ರೇಷ್ಟ ಬೌತಶಾಸ್ತ್ರಜ್ಞನನ್ನು ಕಳಕೊಳ್ಳುತ್ತಿದ್ದೆವು. ಪ್ರತಿಯೊಬ್ಬ ವ್ಯಕ್ತಿಯೂ ದೇವರು ನಮ್ಮ ನಡುವೆ ಇಟ್ಟಿರುವ ಬೆಲೆಬಾಳುವ ನಿಧಿ. ಕ್ರಿಸ್ಮಸ್ ನಮಗೆ ಮಾನವ ವಿಸ್ಮಯದ ಗಾಢತೆಯನ್ನು ಧ್ಯಾನಿಸಲು ಅನುವುಮಾಡಿ ಕೊಡುತ್ತದೆ. ದೇವರ ಪುತ್ರರು ನಮ್ಮ ನಡುವೆ, ನಮ್ಮೊಳಗಿನ ಒಬ್ಬರಂತೆ ಜನಿಸಿದುದರಲ್ಲಿ ನಮ್ಮ ನಿಜವಾದ ಬೆಲೆಯು ಕಾಣಸಿಗುತ್ತದೆ. ಈ ವಾರ್ತೆಯಲ್ಲಿ ಹರ್ಷಪಡೋಣ. ನಿಮಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಷಯಗಳು.
2019 ವರುಷದಲ್ಲಿ ನಾವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ವಿಶೇಷವಾಗಿ ಲಾವ್ದಾತೊ ಸಿ - ವೃಕ್ಷಾವಂದನಾ ಕಾರ್ಯಕ್ರಮದ ಮೂಲಕ ಸುಮಾರು 8000 ಸಸಿಗಳನ್ನು ನೆಟ್ಟಿದ್ದೇವೆ ಹಾಗೂ ಜಲಬಂಧನಾ ಕಾರ್ಯಕ್ರಮದ ಮೂಲಕ ನೀರಿನ ಕೊಯ್ಲು ಮಾಡಲು, ಕೆರೆಗಳನ್ನು ಶುಚಿಗೊಳಿಸಲು, ಪ್ರಕ್ರತಿಯನ್ನು ರಕ್ಷಿಸಲು ಅನೇಕ ವಿಧದಲ್ಲಿ ಪ್ರಯತ್ನಿಸಿದೆವು. ಭಂದುತ್ವ ನಮಗೆ ವಿವಿಧ ಧರ್ಮದ ಅನುಯಾಯಿಗಳ ನಡುವಿನ ಸಂಬಂಧವನ್ನು ವೃದ್ದಿಸಲು ಸಹಾಯ ಮಾಡಿತು.
ಅದರೊಡನೆ 2019 ವರುಷವನ್ನು ಯುವ ಜನರಿಗಾಗಿ ಅರ್ಪಿಸಿ ಯುವಜನರಿಗೆ ಪ್ರೇರಣೆ ನೀಡಿ, ಅವರ ಶಕ್ತಿ ಮತ್ತು ಉದಾರ ಮನಸ್ಸು ಉಪಯೋಗಿಸುವ ಮೂಲಕ ನೆರೆಪೀಡಿತರಿಗೆ ಸಹಾಯ ಮಾಡಿದೆವು. ಯುವಜನರಿಗಾಗಿಯೇ ಅನೇಕ ಕಾರ್ಯಕ್ರಮಗಳನ್ನು ಅಯೋಜಿಸಿ ಅವರ ವ್ಯಕ್ತಿತ್ವದ ವಿಕಸನವು ಪ್ರಭು ಯೇಸುವಿನ ಸುವಾರ್ತೆಯ ಪ್ರಕಾರ ಸಾಕಾರ ಗೊಳಿಸಲು ಪ್ರಯತ್ನಿಸಿದೆವು. 2020, ಫೆಬ್ರವರಿ 2ರಂದು, ಮಂಗಳೂರು, ಬೆಳ್ತಂಗಡಿ ಮತ್ತು ಪುತ್ತೂರು ಧರ್ಮಪ್ರಾಂತ್ಯಗಳ ಯುವಜನರಿಗಾಗಿ ಒಂದು ಕಾರ್ಯಕ್ರಮವನ್ನು ಮಡಂತ್ಯಾರಿನಲ್ಲಿ ಹಮ್ಮಿಕೊಂಡಿದ್ದೇವೆ.
ಮುಂದಿನ ವರುಷ (2020) ಮನುಷ್ಯ ಜೀವಕ್ಕೆ ಗೌರವಕೊಡುವಂತಹ, ರಕ್ಷಿಸುವಂತಹ ಹಾಗೂ ಉನ್ನತಿಯ ಮಟ್ಟಕ್ಕೆ ಏರಿಸಲು ಪೂರಕವಾಗುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವೆವು.
ಮನುಷ್ಯ ಜೀವವು ದೇವರು ಕೊಟ್ಟ ಅಮೂಲ್ಯ ಕೊಡುಗೆ. ಅದನ್ನು ರಕ್ಷಿಸೋಣ, ಬೆಳೆಸೋಣ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ನಿರ್ದಾರ ಮಾಡೋಣ. ಮಾನವ ದೇಹವೇ ದೇವರಿರುವ ದೇವಾಲಯ. ಅಲ್ಲಿ ದೇವರನ್ನು ಸ್ತುತಿಸೋಣ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಘಟನೆ ನನಗೆ ತುಂಬಾ ದುಃಖ ತರುವಂತದ್ದು, ಇಂತಹ ಘಟನೆ ಮರುಕಳಿಸದಂತೆ ನಾವು ನೋಡಬೇಕಾಗಿದೆ. ಘಟನೆಯಲ್ಲಿ ಕುಟುಂಬದ ಸದಸ್ಯರನ್ನು ಕಳಕೊಂಡವರಿಗೆ ಹಾಗೂ ಗಾಯಗೊಂಡವರಿಗೆ ಸಾಂತ್ವನವನ್ನು ಕೋರುತ್ತೇವೆ. ಗಾಯಗೊಂಡವರು ಬೇಗನೆ ಗುಣಮುಖರಾಗಲು ದೇವರಲ್ಲಿ ಪ್ರಾರ್ಥಿಸುತ್ತೇನೆ.ಮಂಗಳೂರಿಗರು ಶಾಂತಿ ಪ್ರಿಯರು, ಪರಸ್ಪರ ಗೌರವಿಸುವವರು. ಈಗ ಜಾತಿ ಮತ ಧರ್ಮಗಳ ಭೇದವಿಲ್ಲದೇ "ನಾವೆಲ್ಲರೂ ಒಂದು" ಎಂದು ಜಗತ್ತಿಗೆ ಸಾರಬೇಕಾಗಿದೆ. ಅದ್ದರಿಂದ ನಾವೆಲ್ಲರೂ ಒಟ್ಟಾಗಿ ಶಾಂತಿ ಕಾಪಾಡಲು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಬಿಷಪ್ ಅವರು ಕರೆನೀಡಿದ್ದಾರೆ.
ಈ ಸಂದರ್ಭದಲ್ಲಿ ಫಾ. ಮಾಕ್ಸಿಂ ನೊರೊನ್ಹಾ ವಿಕಾರ್ ಜನರಲ್ ಮಂಗಳೂರು ಧರ್ಮಪಾಂತ್ರ್ಯ, ಫಾ. ವಿಕ್ಟರ್ ಜಾರ್ಜ್ ಚಾನ್ಸಲರ್ , ಫಾ.ವಿಜಯ್ ಲೋಬೋ ಪಿಆರ್’ಓ , ಮಾರ್ಸೆಲ್ ಮೊಂತೆರೋ ಪಿಆರ್’ಓ, ಫಾ. ರಿಚಾರ್ಡ್ ಡಿಸೋಜಾ ನಿರ್ದೇಶಕರು ಕೆನರಾ ಕಮ್ಯೂನಿಕೇಷನ್, ಎಲಿಯಾಸ್ ಫೆರ್ನಾಂಡಿಸ್ ಮಾಧ್ಯಮ ಸಲಹೆಗಾರರು ಮುಂತಾದವರು ಉಪಸ್ಥಿತರಿದ್ದರು.