ಮಂಗಳೂರು, ಡಿ 23 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯು ಹಿಂಸಾರೂಪ ಪಡೆದು ಪೊಲೀಸ್ ಗುಂಡಿಗೆ ಇಬ್ಬರು ಬಲಿಯಾದ ಘಟನೆ ಕುರಿತು ಈಗಾಗಲೇ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಮಾತ್ರವಲ್ಲದೆ, ಮ್ಯಾಜಿಸ್ಟ್ರೇಟ್ ನೇತೃತ್ವದ ತನಿಖೆಯೂ ನಡೆಯಲಿದೆ.
ಈ ನಡುವೆ ಪೊಲೀಸ್ ಇಲಾಖೆ ಪ್ರಕರಣದ ಕುರಿತು ತನಿಖೆ ನಡೆಸಲು ಸಾರ್ವಜನಿಕರಿಂದ ಸಹಕಾರ ಯಾಚಿಸಿದೆ. " ಡಿಸೆಂಬರ್ 19 ರ ಮಂಗಳವಾರದಂದು ಮಂಗಳೂರು ನಗರದಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಯಾವುದೇ ಫೋಟೋ ಅಥವಾ ವಿಡಿಯೋ ವಿಷಯವನ್ನು ಹೊಂದಿರುವ ಸಾರ್ವಜನಿಕರಿಗೆ ಅದನ್ನು mangalurunorthmgc@gmail.com ಗೆ ಮೇಲ್ ಮಾಡಲು ಅಥವಾ 9480802327 ಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಲು ನಾನು ಮನವಿ ಮಾಡುತ್ತೇನೆ. ಇದು ಸತ್ಯವನ್ನು ಎತ್ತಿಹಿಡಿಯುವಲ್ಲಿ ತನಿಖಾ ತಂಡಕ್ಕೆ ಸಹಾಯ ಮಾಡುತ್ತದೆ ಎಂದು ಟ್ವಿಟರ್ ನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್ ಮನವಿ ಮಾಡಿದ್ದಾರೆ.