ಮಂಗಳೂರು, ಡಿ 23(Daijiworld News/MSP): ಚಲನಚಿತ್ರ ನಟರಾಗಿ, ತುಳು ರಂಗಭೂಮಿಯ ಹಿರಿಯ ರಂಗನಟರಾಗಿ ಕಲಾ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ್ದ ರೋಹಿದಾಸ್ ಕದ್ರಿ ಅವರು ಅಲ್ಪಕಾಲದ ಅನಾರೋಗ್ಯದಿಂದ ಡಿ.23ರ ಸೋಮವಾರ ವಿಧಿವಶರಾಗಿದ್ದಾರೆ.
ಗತ್ತು-ಗೈರತ್ತು, ಸ್ವರಭಾರದ ತಾಕತ್ತು, ಅಭಿನಯದ ಹಿಕ್ಮತ್ತು ಹೊಂದಿದ್ದ ಅವರು ತುಳು ರಂಗಭೂಮಿಗೆ ಖಳನಾಯಕ ಪಾತ್ರಕ್ಕೆ ಆಸ್ತಿಯಾಗಿದ್ದ ನಟರಾಗಿದ್ದರು.
ತುಳು ಚಿತ್ರರಂಗಕ್ಕೆ ಹೊಸ ಸ್ಪರ್ಶ ನೀಡಿದ ಬಂಗಾರ್ ಪಟ್ಲೆರ್ ಚಿತ್ರದ ಖಳನಾಯಕ ಪಾತ್ರ ಅವರಿಗೆ ಚಿತ್ರರಂಗದಲ್ಲಿ ಸ್ಟಾರ್ ವ್ಯಾಲ್ಯೂ ನೀಡಿತ್ತು. ತುಳು ಸಾಹಿತ್ಯ ಅಕಾಡಮಿಯೂ ನಾಟಕ ಕ್ಷೇತ್ರದ ಸಾಧನೆಗಾಗಿ ರೋಹಿದಾಸ್ ಕದ್ರಿ ಅವರನ್ನು ಸನ್ಮಾಸಿತ್ತು.
ನಟನೆ ಮಾತ್ರವಲ್ಲದೇ, ಕಲಾಸಂಘಟಕರಾಗಿ, ಕಿರಿಯ ಕಲಾವಿದರ ಮಾರ್ಗದರ್ಶಕ, ತುಳು ನಾಟಕ ಕಲಾವಿದರ ಒಕ್ಕೂಟದ ಗೌರವ ಸಲಹೆಗಾರರಾಗಿ, ಐದು ದಶಕಗಳ ಕಾಲ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು.