ಕನ್ನಡ ಚಿತ್ರರಂಗದ ಕಂಡ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ. ಇವರು ಕುಂದಾಪುರದವರು. ಕುಂದಾಪುರದ ಅಪ್ಪಟ ಪ್ರತಿಭೆ. ಕುಂದಾಪುರ ಸಮೀಪದ ಕೋಣಿಯ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾಶಿನಾಥ್ ಮುಂದೆ ಬೆಳೆದ ಪರಿ ಅದ್ಬುತ. ತನ್ನ ಸಾಧನೆಯ ಹೆಜ್ಜೆಗಳನ್ನು ಇಡುತ್ತಾ ಹೋದ ಕಾಶಿನಾಥ್ ಇವತ್ತು ನಮ್ಮೊಂದಿಗಿಲ್ಲವಾದರೂ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗೆ ಎಂದೂ ಸಾವಿಲ್ಲ.
ಕಾಶಿನಾಥ್ ಹೆಸರು ಕೇಳಿದಾಕ್ಷಣ ಕುಂದಾಪುರದ ಜನತೆ ರೋಮಾಂಚನಗೊಳ್ಳುತ್ತಿದ್ದರು. ಏಕೆಂದರೆ ಈ ಪ್ರತಿಭೆ ಕುಂದಾಪುರದ್ದು ಎನ್ನುವ ಹೆಮ್ಮೆ ಇತ್ತು. ಕಾಶಿನಾಥ್ ಅನಿವಾರ್ಯವಾಗಿ ಕುಂದಾಪುರವನ್ನು ಅಗಲಿದರೂ ಕುಂದಾಪುರವನ್ನು ಸಂಪೂರ್ಣವಾಗಿ ಮರೆತಿರಲಿಲ್ಲ. ಮೂರು ವರ್ಷಗಳ ಹಿಂದೆ ಬಸ್ರೂರುವಿನಲ್ಲಿ ನಡೆದ ಕುಂದಾಪ್ರ ಕನ್ನಡದ ಸಮ್ಮೇಳನದಲ್ಲಿ ಭಾಗವಹಿಸಿದ ಅವರು ಕುಂದಾಪುರದ ಅಂದಿನದ ನೆನೆಪುಗಳನ್ನು ಬಿಚ್ಚಿಕೊಂಡಿದ್ದರು. ಕುಂದಾಪ್ರ ಕನ್ನಡದಲ್ಲಿ ಮಾತುಗಳನ್ನು ಆಡಿದ್ದರು. ತಾವು ಅಂದು ಬೆಳೆದ ಕೋಣಿ, ಕೋಟೇಶ್ವರ ಪರಿಸರ, 2ನೇ ತರಗತಿ ತನಕ ಓದಿದ ಕೋಣಿ ಕಿ.ಪ್ರಾ.ಶಾಲೆ ಎಲ್ಲವನ್ನು ನೆನಪು ಮಾಡಿಕೊಂಡಿದ್ದರು.
ಕಾಶಿನಾಥ್ ದೊಡ್ಡ ನಿರ್ದೇಶಕ, ನಟನಾಗಿ ಬೆಳೆದರೂ ಕೂಡಾ ಕುಂದಾಪುರ ಭಾಗದ ಪ್ರತಿಭೆಗಳನ್ನು ಚೆನ್ನಾಗಿ ಪೋಷಿಸಿದರು. ಹೊಸ ಹೊಸ ಪ್ರತಿಭೆಗಳಿಗೆ ವಿಪುಲ ಅವಕಾಶವಿತ್ತಿದ್ದರು. ಅದರಲ್ಲಿ ಓರ್ವರು ಉಪೇಂದ್ರ ಅವರು. ಉಪೇಂದ್ರರವರ ಪ್ರತಿಭೆಯನ್ನು ಚಿತ್ರರಂಗದ ಮುಂದೆ ತಂದವರೇ ಕಾಶಿನಾಥ್. ಹೀಗೆ ಮನೋಹರ್, ಸುನೀಲ್ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಕಾಶೀನಾಥ್ ಅವರಿಗಿದೆ.
ಕಾಶಿನಾಥ್ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದವರು. ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರ ವಿಭಿನ್ನ ಶೈಲಿಯ ಚಿತ್ರಗಳು ಯಶಸ್ಸಿನ ಉತ್ತುಂಗಕ್ಕೇರಿ ಗಲ್ಲಾಪೆಟ್ಟಿಗೆಯನ್ನು ಸೂರೆ ಹೊಡೆದಿದ್ದವು. ಅವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ. ಅವರ ಚಿತ್ರಗಳಲ್ಲಿ ಪ್ರಮುಖವಾದವು ಅನಂತನ ಅವಾಂತರ, ಅನುಭವ, ಹೆಂಡತಿ ಎಂದರೆ ಹೇಗಿರಬೇಕು ಇತ್ಯಾದಿ, ಅವರ ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ. ಇವರ ಅಜಗಜಾಂತರ(1991) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (1997) ಎಂದು ರೀಮೇಕ್ ಮಾಡಲಾಗಿದೆ. ಇದರಲ್ಲಿ ಅನಿಲ್ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಮಾತೋಂಡ್ಕರ್ ಅಭಿನಯಿಸಿದ್ದಾರೆ.ಇವರು ಕಡಿಮೆ ವೆಚ್ಛದಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರು. ಇತ್ತೀಚೆಗೆ ಬಿಡುಗಡೆಯಾದ ಚೌಕ ಅವರ ಕೊನೆಯ ಸಿನಿಮಾವಾಗಿತ್ತು.
ಕೋಣಿಯ ಕುವರ ಕಾಶಿನಾಥ್
ವಾಸುದೇವ ರಾವ್ ಮತ್ತು ಸರಸ್ವತಿ ದಂಪತಿಗಳ ಪುತ್ರರಾಗಿ 1951ರಲ್ಲಿ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾಶಿನಾಥ್ ಬಾಲ್ಯದಲ್ಲೇ ಚುರುಕು ಮತಿತ್ವ ಬೆಳೆಸಿಕೊಂಡಿದ್ದರು. ತಂದೆ ವಾಸುದೇವ ರಾವ್ ಉದ್ಯಮಿ ಆಗಿದ್ದರು. ಮೂವರು ಸಹೋದರರು, ಓರ್ವ ಸಹೋದರಿಯ ಜೊತೆ ಬೆಳೆದ ಕಾಶಿನಾಥ್ 1955ರಲ್ಲಿ 1 ಮತ್ತು 2 ನೇ ತರಗತಿ ಶಿಕ್ಷಣವನ್ನು ಕೋಣಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಆಗಲೇ ತಂದೆ ಬೆಂಗಳೂರಿನಲ್ಲಿ ಉದ್ಯಮ ಆರಂಭಿಸಿದ್ದರಿಂದ ಅಲ್ಲಿಗೆ ಹೋಗುವುದು ಅನಿವಾರ್ಯವಾಗಿತ್ತು. 2ನೇ ತರಗತಿಗೆ ಕೋಣಿ ಶಾಲೆಯಿಂದ ಬೀಳ್ಕೊಂಡ ಪುಟ್ಟ ಬಾಲಕ ಕಾಶಿನಾಥ ಕನ್ನಡ ಚಿತ್ರರಂಗದಲ್ಲಿ ದೈತ್ಯಶಕ್ತಿಯಾಗಿ ಬೆಳೆಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಬೆಂಗಳೂರಿಗೆ ತೆರಳಿದ ನಂತರ ಕಾಶಿನಾಥ್ ಶಿಕ್ಷಣವನ್ನು ಮುಂದುವರಿಸಿ ವಿಜಯ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು.
ಕಾಶಿನಾಥ್ ಎಂದರೆ ಕೋಣಿ
ಕಾಶಿನಾಥ್ ಹೆಸರು ಬಂದಾಗಲೆಲ್ಲಾ ಕುಂದಾಪುರದ ಜನರಿಗೆ ಕೋಣಿ ಎಂಬಷ್ಟು ಆಪ್ಯಾಯಾಮಾನ ಉಂಟಾಗುತ್ತಿತ್ತು. ಕಾಶಿನಾಥ್ ನಮ್ಮೂರಿನವರು. ಇದೇ ಕೋಣಿಯವರು ಎನ್ನುವ ಹೆಮ್ಮೆ ಕುಂದಾಪ್ರಗರಿಗಿತ್ತು. ಕಾಶಿನಾಥ್ ಕುಟುಂಬ ಬೆಂಗಳೂರಿಗೆ ತೆರಳಿದ ನಂತರ ಅವರಿದ್ದ ಕೋಣಿಯ ಮನೆಯನ್ನು ಅವರ ಚಿಕ್ಕಮ್ಮ ಜಯಲಕ್ಷ್ಮೀ ಹತ್ವಾರ್ ನೋಡಿಕೊಳ್ಳುತ್ತಿದ್ದರು. 1994ರಲ್ಲಿ ಕಾಶಿನಾಥ್ರ ಮನೆ, ಮೂರು ಎಕರೆ ಜಮೀನನ್ನು ಸುನಂದ ಚಂದ್ರ ಶೆಟ್ಟಿ ಅವರಿಗೆ ಮಾರಾಟ ಮಾಡಲಾಯಿತು. ಇವತ್ತು ಕಾಶಿನಾಥ್ರ ಮನೆ ಇಲ್ಲಿಲ್ಲ. ಹಳೆಯ ಮನೆ ತಗೆದು ಜಮೀನು ಖರೀದಿಸಿದರು ಹೊಸ ಮನೆ ನಿರ್ಮಿಸಿದ್ದಾರೆ.
ಕಾಶಿನಾಥ್ ನೆನಪುಗಳು ಇಲ್ಲಿವೆ
ಕಾಶಿನಾಥ್ ಹುಟ್ಟಿದ ಮನೆ ಈಗ ಇಲ್ಲ ಎಂದಾಗ ಅವರಿಗೆ ಸಂಬಂಧಪಟ್ಟಿದ್ದು ಏನೂ ಇಲ್ಲ ಅಂತಲ್ಲ. ಅವರ ಜಮೀನು ಖರೀದಿಸಿದರುವ ಸುನಂದ ಚಂದ್ರ ಶೆಟ್ಟಿ ಅವರು ಕೂಡಾ ಕಾಶಿನಾಥ್ ಅಭಿಮಾನಿಗಳು; ಸಹೃದಯಿಗಳು. ಕಾಶಿನಾಥ ಕುಟುಂಬ ಪೂಜಿಸುತ್ತಿದ್ದ ತುಳಸಿ ಕಟ್ಟೆ, ಕುಡಿಯಲು ನೀರಿಗಾಗಿ ಉಪಯೋಗಿಸುತ್ತಿದ್ದ ಬಾವಿ, ಅವರು ಉಪಯೋಗಿಸುತ್ತಿದ್ದ ಶೌಚಾಲಯ, ಇಂದಿಗೂ ಹಾಗೆಯೇ ಇದೆ.