ಉಡುಪಿ, ಡಿ 23 (DaijiworldNews/SM): ಜಿಲ್ಲಾ ರೈತ ಸಂಘ ಉಡುಪಿ ವತಿಯಿಂದ ಈ ಬಾರಿಯ ವಿಶ್ವ ರೈತರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ‘ರೈತರ ನಡಿಗೆ ಇಲಾಖೆಯ ಕಡೆಗೆ’ ಎನ್ನುವ ವಿಷಯದಲ್ಲಿ ಕುಂದಾಪುರದ ಕೃಷಿ ಇಲಾಖೆ ಮತ್ತು ತೋಟಗಾರಿಕೆಗೆ ಭೇಟಿ ನೀಡಿದ ರೈತ ಸಂಘದ ತಂಡ ಅಧಿಕಾರಿಗಳ ಜೊತೆ ಚರ್ಚೆ ಸಂವಾದ ನಡೆಸಿತು.
ಕೃಷಿ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ರೂಪಾ ಮಾಡ ಅವರು ಇಲಾಖೆಯ ವತಿಯಿಂದ ರೈತರಿಗೆ ಸಿಗುವ ಸಲವತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಇಲಾಖೆಯಿಂದ ಸಿಗುವ ಸವಲತ್ತು ನಿಜವಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯ ರೈತ ಸಂಘಕ್ಕೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ರೈತ ಸಂಘದ ಪ್ರತಿನಿಧಿಗಳ ಅಸಮಾಧಾನ ವ್ಯಕ್ತಪಡಿಸಿ, ನಮ್ಮ ಸಂಘಕ್ಕೂ ಮಾಹಿತಿ ನೀಡಿ ಎಂದು ಆಗ್ರಹಿಸಿದರು.
ಉಡುಪಿ ಜಿಲ್ಲಾ ರೈತ ಸಂಘ ಜಿಲ್ಲೆಯ ರೈತರ ಪರವಾಗಿ ಇರುವ ಸಂಘಟನೆ. ಇದು ಮಂಡಲದ ಹಂತದಿಂದ ಜಿಲ್ಲಾ ಮಟ್ಟದ ತನಕ ಇದೆ. ರೈತರನ್ನು ತಕ್ಷಣ ಸಂಪರ್ಕಿಸುವ ಪರಿಣಾಮಕಾರಿ ವ್ಯವಸ್ಥೆಯಾಗಿ ರೈತ ಸಂಘ ಬೆಳೆದಿದೆ. ನಾವು ನಿಜವಾದ ಫಲಾನುಭವಿಯಾಗಿದ್ದು, ಸಲವತ್ತು ಪಡೆಯಲು ಅಸಮರ್ಥನಾದ ಅಸಹಾಯಕ ರೈತನ ಪರವಾಗಿ ಕೆಲಸ ಮಾಡುತ್ತೇವೆ ಎಂದರು.
ನಂತರ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿದ ರೈತ ಸಂಘದ ಪ್ರತಿನಿಧಿಗಳು ಅಲ್ಲಿ ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜೀವ ನಾಯ್ಕರ ಜೊತೆ ಮುಕ್ತ ಸಂವಾದ ನಡೆಸಿದರು.
ಮಾಹಿತಿ ನೀಡಿದ ಸಂಜೀವ ನಾಯ್ಕರು ಇವತ್ತು ಸವಲತ್ತುಗಳು ಬೇಡಿಕೆ ಆಧಾರಿತವಾಗಿ ಬರುತ್ತದೆ. ಈ ಬಾರಿ ಕುಂದಾಪುರ ತಾಲೂಕಿಗೆ 4 ಕೋಟಿ ಅನುದಾನ ಬಂದಿದ್ದು, 3.5 ಕೋಟಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಹೋಗಿದೆ. ಸಮಗ್ರ ತೋಟಗಾರಿಕಾ ಬೆಳಗಾರರ ಗುಂಪನ್ನು ಮಾಡಲಾಗಿದ್ದು, ಇಲ್ಲಿ ಕಾಳು ಮೆಣಸು, ಸೇವಂತಿಗೆ, ಬಾಳೆ ಬೆಳೆಗಾರರು ಗುಂಪು ಕಾರ್ಯನಿರ್ವಹಿಸುತ್ತಿದೆ ಎಂದರು.